ಮಂಗಳೂರು,ಏ 22 (Daijiworld News/MSP): ಸಚಿವೆ ಜಯಮಾಲ ನನ್ನ ನಾಲಗೆಯನ್ನು ಚಪ್ಪಲಿಗೆ ಹೋಲಿಸಿದ್ದಾರೆ.ಹಾಗಾದರೆ ಪ್ರತಿನಿತ್ಯ ಹೊಲಸು ಮಾತನಾಡುವ ಕಾಂಗ್ರೆಸ್ ನಾಯಕರ ನಾಲಗೆ ಏನು ? ಮೊದಲು ಕಾಂಗ್ರೆಸ್ ನಾಯಕರಿಗೆ ಜಯಮಾಲ ಸಭ್ಯತೆಯ ಕ್ಲಾಸ್ ತೆಗೆದುಕೊಳ್ಳಲಿ ಎಂದು ಸಿ.ಟಿ ರವಿ, ಸಚಿವೆ ಜಯಮಾಲ ವಿರುದ್ದ ಕಿಡಿ ಕಾರಿದ್ದಾರೆ.
ಅವರು ನಗರದಲ್ಲಿ ಏ.22 ರ ಮಂಗಳವಾರ ಬಿಜೆಪಿ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಜಯಮಾಲಾ ಅವರ ಹೇಳಿಕೆಗೆ ತಿರುಗೇಟು ನೀಡಿದರು. ಮಹಿಳೆಯರ ಬಗ್ಗೆ ಅವ್ಯಾಚ್ಯ ಪದ ಬಳಸಿದ್ದ ಸಿ.ಟಿ ರವಿ ವಿರುದ್ದ ಸಚಿವೆ ಜಯಮಾಲ ಹರಿಹಾಯ್ದಿದ್ದರು. ನನ್ನ ನಾಲಿಗೆ ಚಪ್ಪಲಿಯಾದರೆ ಸಿ.ಎಂ ಇಬ್ರಾಹಿಂ ನಾಲಗೆಯನ್ನು ಯಾವುದಕ್ಕೆ ಹೋಲಿಸುತ್ತೀರಾ, ಗಟಾರದ ಹಂದಿಗೋ ಅಥವಾ ಟಾಯ್ಲೆಟ್ ನಲ್ಲಿ ಹುಳಕ್ಕೆ ಹೋಲಿಸ್ತೀರಾ ಎಂದು ಅವರು ಪ್ರಶ್ನಿಸಿದ್ದಾರೆ. ಉಂಡ ಮನೆಗೆ ದ್ರೋಹ ಬಗೆದವರಿಗೆ ಆ ಪದ ಬಳಸಿದ್ದು ನಿಜ ಆದರೆ ಅದು ನನ್ನ ಭಾಷೆಯಲ್ಲ ಹಾಸನದ ಜನರ ಭಾಷೆಯಾಗಿದೆ. ಅಲ್ಲಿನ ಜನ ಹೇಳಿದ ಮಾತನ್ನು ನಾನು ಆ ಸಂದರ್ಭ ಪುನರುಚ್ಛರಿಸಿದ್ದೆ ಎಂದು ಪದ ಬಳಕೆಯ ವಿಚಾರವನ್ನು ಸಮರ್ಥಿಸಿಕೊಂಡರು.
ಸ್ಪಷ್ಟ ಕನ್ನಡ ಮಾತನಾಡುವ ನನ್ನ ನಾಲಿಗೆಗೆ ಬಜೆ ತಿನ್ನಿಸಲಿಲ್ಲವೇ ಅನ್ನುತ್ತಾರಲ್ಲ, ಆದರೆ ಕನ್ನಡಿಗ ವಿಶ್ವೇಶ್ವರಯ್ಯ, ಕನಕದಾಸರ ಹೆಸರು ಸರಿ ಉಚ್ಚರಿಸಲು ಬಾರದ ರಾಹುಲ್ ಗಾಂಧಿ ನಾಲಗೆಗೆ ಮೊದಲು ಬಜೆ ತಿಕ್ಕಿಸಲಿ ಮಾತ್ರವಲ್ಲ ಜಯಮಾಲರಿಗೆ ಸಂಸ್ಕೃತಿ-ಸಭ್ಯತೆ ಇದ್ದರೆ ಮೊದಲು ಕಾಂಗ್ರೆಸ್ ನಾಯಕರಿಗೆ ಸಭ್ಯತೆಯ ಕ್ಲಾಸ್ ತೆಗೆದುಕೊಳ್ಳಲಿ. ಬಣ್ಣದ ಬದುಕಿನಲ್ಲಿರುವ ಮಂದಿಯದ್ದು ಒಳಗೊಂದು-ಹೊರಗೊಂದು ವೇಷವಾಗಿರುತ್ತದೆ. ಹೀಗಾಗಿ ಜಯಮಾಲ ಕ್ಲಾಸ್ ತೆಗೆದುಕೊಳ್ಳೋದಾದ್ರೆ ಸಂಪನ್ಮೂಲ ವ್ಯಕ್ತಿಯನ್ನು ನಾನು ಕಳುಹಿಸಿ ಕೊಡುತ್ತೇನೆ ಎಂದು "ಸಿ.ಟಿ ರವಿ ಅವರಿಗೆ ಪುಸ್ತಕ ಕಳುಹಿಸಿಕೊಡುತ್ತೇನೆ" ಎಂದ ಜಯಮಾಲ ಮಾತಿಗೆ ತಿರುಗೇಟು ನೀಡಿದರು.