ಕಾಸರಗೋಡು,ಏ 22 (Daijiworld News/MSP): ಲೋಕಸಭಾ ಚುನಾವಣೆಗೆ ಕಾಸರಗೋಡು ಸಜ್ಜಾಗಿದ್ದು , ನಾಳೆ ( 23) ನಡೆಯಲಿರುವ ಮತದಾನದಲ್ಲಿ 10,11,031 ಮಂದಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಮತದಾನಕ್ಕಾಗಿ ಮತಗಟ್ಟೆಗಳು ಸಜ್ಜಾಗಿದ್ದು , ಜಿಲ್ಲೆಯ 968 ಮತಗಟ್ಟೆಗಳಿಗಿರುವ ಸಾಮಗ್ರಿಗಳ ವಿತರಣೆ ಇಂದು ನಡೆಯಿತು. ಕಾಸರಗೋಡು ಸರಕಾರಿ ಕಾಲೇಜು , ಪಡನ್ನಕ್ಕಾಡ್ ನೆಹರೂ ಕಾಲೇಜುಗಳಲ್ಲಿ ಮತಗಟ್ಟೆಗಳ ಸಾಮಾಗ್ರಿ ವಿತರಣೆ ನಡೆದಿದ್ದು, ಮತಗಟ್ಟೆಗೆ ನೇಮಕಗೊಂಡಿರುವ ಸಿಬಂದಿಗಳು ಮತಗಟ್ಟೆಗೆ ತಲಪಿಸಿದರು.
ನಾಳೆ ಬೆಳಿಗ್ಗೆ 7 ರಿಂದ ಸಂಜೆ 5 ರ ತನಕ ಮತದಾನ ನಡೆಯಲಿದ್ದು 5,15,942ಮಹಿಳೆಯರು , 5,95,088 ಪುರುಷರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆ . ಈ ಪೈಕಿ 24, 859ಹೊಸ ಮತದಾರರಾಗಿದ್ದರೆ .ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ ಮತದಾರರಿದ್ದಾರೆ. 1,05, 462 ಮಹಿಳೆಯರು , 1,06, 624 ಪುರುಷ ರು ಸೇರಿದಂತೆ 2,12,086 ಮತದಾರರಿದ್ದಾರೆ .
ಪೈವಳಿಕೆ ಗ್ರಾಮ ಪಂಚಾಯತ್ 150 ನಂಬ್ರದ ಪೈವಳಿಕೆ ಸರಕಾರಿ ಹೈಸ್ಕೂಲ್ ಮತಗಟ್ಟೆಯಲ್ಲಿ 1385 ಮತದಾರರಿದ್ದಾರೆ . ವಳಿಯಪರಂಬ ಗ್ರಾಮ ಪಂಚಾಯತ್ ನ 151ನೇ ವಳಿಯಪರಂಬ ಅಂಗನವಾಡಿ ಮತಗಟ್ಟೆಯಲ್ಲಿ ಕನಿಷ್ಟ 226 ಮತದಾರಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲಿ ವಿವಿ ಪ್ಯಾಟ್ ಹೊಂದಿದ್ದು , ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ .
ಕಾಸರಗೋಡು ಕ್ಷೇತ್ರದ ಚುನಾವಣೆ ಈ ಬಾರಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 30 ವರ್ಷಗಳಿಂದ ಸಿಪಿಎಂ ನೇತೃತ್ವದ ಎಲ್ ಡಿ ಎಫ್ ನ ಭದ್ರಕೋಟೆಯಾಗಿರುವ ಈ ಕ್ಷೇತ್ರವು ಎಲ್ ಡಿ ಎಫ್ , ಕಾಂಗ್ರೆಸ್ ನೇತೃತ್ವದ ಯು ಡಿ ಎಫ್ ಹಾಗೂ ಬಿಜೆಪಿಗೆ ನಿರ್ಣಾಯಕವಾಗಿದೆ. ಅಭಿವೃದ್ಧಿಗಿಂತ ಈ ಬಾರಿಯ ಚುನಾವಣಾ ಪ್ರಚಾರವು ಶಬರಿಮಲೆ ವಿಷಯ ಮತ್ತು ಪೆರಿಯದಲ್ಲಿ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ ಪ್ರಕರಣವು ರಾಜಕೀಯ ಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿತ್ತು .
ಪೆರಿಯದಲ್ಲಿ ನಡೆದ ಅವಳಿ ಕೊಲೆ ಸಿಪಿಎಂಗೆ ಭಾರಿ ಹಿನ್ನಡೆ ತಂದು ಕೊಟ್ಟಿತ್ತು. ಆರಂಭದಲ್ಲಿ ಕೊಲೆಯಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಸಿಪಿಎಂ ಕಾರ್ಯಕರ್ತರ ಬಂಧನವಾಗುವುದರೊಂದಿಗೆ ಪಕ್ಷವನ್ನೇ ಇಕ್ಕಟ್ಟಿಗೆ ಸಿಲುಕಿಸಿತ್ತು . ಕೊಲೆಗೀಡಾದ ಕೃಪೇಶ್ ಮತ್ತು ಶರತ್ ಲಾಲ್ ರ ಮನೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನ ಪ್ರಮುಖ ನಾಯಕರ ಭೇಟಿ ಕೂಡಾ ಚುನಾವಣಾ ಪ್ರಚಾರ ಸಮಯದಲ್ಲಿ ಹೊಸ ಚೈತನ್ಯ ನೀಡಿತ್ತು. ಆದರೆ ಸಿಪಿಎಂ ಕೋಮುವಾದ ಹಾಗೂ ಕಳೆದ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರ ಮುಂದಿಟ್ಟಿದ್ದು , ಬಿಜೆಪಿ ಶಬರಿಮಲೆ ವಿಷಯವನ್ನು ಹಾಗೂ ಮತ್ತೊಮ್ಮೆ ಮೋದಿ ಸರಕಾರ ರಚನೆಗೆ ಮತಯಾಚನೆ ಮಾಡಿದರು .
ಆದರೆ ತ್ರಿಕೋನ ಸ್ಪರ್ಧೆಯ ಲಾಭ ಯಾರೂ ಪಡೆಯುತ್ತಾರೆ ಎಂಬುದು ಮತದಾರರು ನಾಳೆ ಹಣೆಬರಹ ನಿರ್ಧರಿಸಲಿದ್ದಾರೆ . ಯು ಡಿ ಎಫ್ ನ ರಾಜ್ ಮೋಹನ್ ಉಣ್ಣಿತ್ತಾನ್, ಎಲ್ ಡಿ ಎಫ್ ನ್ ಕೆ. ಪಿ ಸತೀಶ್ಚಂದ್ರನ್, ಬಿಜೆಪಿಯ ಕುಂಟಾರು ರವೀಶ ತಂತ್ರಿ ಹಾಗೂ ಬಿಎಸ್ಪಿ ಯಿಂದ ಬಶೀರ್ ಆಲಡಿ ಅಲ್ಲದೆ ಐವರು ಪಕ್ಷೇತರರು ಕಣದಲ್ಲಿದ್ದಾರೆ