ಉಳ್ಳಾಲ, ಜ 11 (DaijiworldNews/HR): ಅಗಲಿದ ನೃತ್ಯ ವಿದ್ಯಾರ್ಥಿನಿ ಸ್ಮರಣಾರ್ಥ ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲ ಸಂಸ್ಥೆಯವರು ದಾನಿಗಳಿಂದ, ಮೃತ ವಿದ್ಯಾರ್ಥಿನಿ ಹೆತ್ತವರು, ವಿದ್ಯಾರ್ಥಿಗಳು ಸಂಗ್ರಹಿಸಿದ ಸಹಾಯಧನವನ್ನು ಜಿಲ್ಲೆಯ ಇಬ್ಬರು ಕ್ಯಾನ್ಸರ್ ರೋಗಿ ಮಕ್ಕಳ ಚಿಕಿತ್ಸೆಗೆ ನೀಡಲು ಮುಂದಾಗುವ ಮೂಲಕ ಮಾನವೀಯತೆ ತೋರಿದ್ದಾರೆ.
11 ವರ್ಷಗಳ ಹಿಂದೆ ಗ್ರಾಮೀಣ ಭಾಗದಲ್ಲಿ ಭರತನಾಟ್ಯದ ಸೊಬಗು, ಶಾಸ್ತ್ರೀಯ ಪರಂಪರೆಯ ಜ್ಞಾನ ಕೊಡಿಸುವ ಉದ್ದೇಶದೊಂದಿಗೆ ಸಂಸ್ಥೆ ಆರಂಭಗೊಂಡಿತ್ತು. ದುಬೈ, ಅಬುದಾಬಿ, ಶ್ರೀಲಂಕಾ ದೇಶಗಳಲ್ಲಿ ಸಂಸ್ಥೆ ಈಗಾಗಲೇ ನೃಥ್ಯ ಪ್ರದರ್ಶನಗೈದು ಜನಮೆಚ್ಚುಗೆಯನ್ನು ಪಡೆದಿದೆ. ಇದೇ ಸಂಸ್ಥೆಯಲ್ಲಿ ಆಡಿ ಬೆಳೆದು, ನೃತ್ಯ ವಿದ್ಯಾರ್ಥಿನಿಯಾಗಿದ್ದ ಶೃತಿ ಬೇಕಲ್ (22) ಅವರು ಇತ್ತೀಚೆಗೆ ನಿಧನರಾಗಿದ್ದರು. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವೀಧರೆಯಾಗಿದ್ದ ಶೃತಿ ಬೇಕಲ್ ಉಳ್ಳಾಲದ ಮಂತ್ರ ನಾಟ್ಯಕಲಾ ಗುರುಕುಲದಲ್ಲಿ ಭರತನಾಟ್ಯ ನೃತ್ಯ ವಿದ್ಯಾರ್ಥಿನಿಯಾಗಿದ್ದರು. ಸಂಸ್ಥೆಯಲ್ಲಿದ್ದುಕೊಂಡು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದವರು. ಇದೀಗ ಅವರ ಸ್ಮರಣಾರ್ಥ `ಶೃತಿ ಸ್ಮೃತಿ ನಿಧಿ' ಅನ್ನುವ ಯೋಜನೆಯನ್ನು ಹಮ್ಮಿಕೊಂಡಿರುವ ಸಂಸ್ಥೆ, ದಾನಿಗಳಿಂದ, ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಮೊತ್ತವನ್ನು ಜಿಲ್ಲೆಯ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಇಬ್ಬರು ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಅವರ ಕುಟುಂಬಸ್ಥರಿಗೆ ಜ.14 ರಂದು ಉಳ್ಳಾಲದಲ್ಲಿ ಹಮ್ಮಿಕೊಂಡ ಗುರುಕುಲ ಉತ್ಸವ-2024 ರಲ್ಲಿ ಶೃತಿ ಅವರ ತಂದೆ ನರೇಶ್ ಪಂಡಿತ್ ಹೌಸ್ ಹಸ್ತಾಂತರಿಸಲಿದ್ದಾರೆ.
ತೊಕ್ಕೊಟ್ಟು ಸೇವಾಸೌಧದಲ್ಲಿರುವ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಇಂದು ಆಯೋಜಿಸಿದ್ದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆ ನೃತ್ಯಗುರು ಶ್ರಾವಣ್ ಕುಮಾರ್ ಉಳ್ಳಾಲ್ ಇವರು, ಉಳ್ಳಾಲದ ಶ್ರೀ ಚೀರುಂಭ ಭಗವತೀ ವೇದಿಕೆಯಲ್ಲಿ ಜ.14 ರಂದು 10ಕ್ಕೆ ಗುರುಕುಲ ಉತ್ಸವ-2024 ಉದ್ಘಾಟನೆಗೊಳ್ಳಲಿದೆ.
ಶಾಂತಾ ನಾಟ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಉಳ್ಳಾಲ ಮೋಹನ್ ಕುಮಾರ್ ದೇವತಾ ಜ್ಯೋತಿ ಪ್ರಜ್ವಲಿಸಲಿದ್ದು, ಸ್ಪಂಧನ ಕಾಪರೇಟಿವ್ ಸೊಸೈಟಿಯ ನಿರ್ದೇಶಕ ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಶ್ರೀ ಚೀರುಂಭ ಭಗವತಿ ಕ್ಷೇತ್ರ ಉಳ್ಳಾಲ, ತೀಯ ಸಮಾಜಸೇವಾ ಸಂಘದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಅಧ್ಯಕ್ಷತೆ ವಹಿಸಲಿದ್ದು, ಆಡಳಿತ ಮೊಕ್ತೇಸರ ಗಂಗಾಧರ್ ಉಳ್ಳಾಲ್, ಕೋಶಾಧಿಕಾರಿ ಉಮೇಶ್ ಬೆಂಜನಪದವು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಗೌರವ ಉಪಸ್ಥಿತರಿದ್ದು, ಆಂಕಲಾಜಿ ವಿಭಾಗ ಮುಖ್ಯಸ್ಥ ಡಾ. ನಜೀಬ್ ಬೆಹ್ಜದ್ ಮೊಹಮ್ಮದ್ ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಮತ್ತು ಮಹಿಳೆಯರ ಹಾಗೂ ಹೆಣ್ಣು ಮಕ್ಕಳ ಸುರಕ್ಷತೆ ಹಾಗೂ ಸ್ವರಕ್ಷಣೆ ಕುರಿತು ಉರ್ವ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಭಾರತಿ ಜಿ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಈ ಬಾರಿಯ ಕಲಾ ಮಂತ್ರ್ಯಕ ಪ್ರಶಸ್ತಿ ಹಾಗೂ ದಿಕ್ಸೂಚಿ ಭಾಷಣವನ್ನು ವಿಠಲ್ ನಾಯಕ್ ಕಲ್ಲಡ್ಕ ನೆರವೇರಿಸಲಿದ್ದಾರೆ.
ಈ ಸಂದರ್ಭ ಸ್ಥಾಪಕಾಧ್ಯಕ್ಷೆ ಶಕೀಲಾ ಜನಾರ್ದನ್, ಟ್ರಸ್ಟಿಗಳಾದ ಕಿರಣ್ ಉಳ್ಳಾಲ್, ಶೈನಾ ಶ್ರಾವಣ್, ಬಬಿತಾ ಕಿರಣ್ ಉಪಸ್ಥಿತರಿದ್ದರು.