ಮಂಗಳೂರು, ಜ 11(DaijiworldNews/AA): ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳಗಳ ಬಯಲಾಟದ ವೇಳೆಯಲ್ಲಿ ಶಬ್ದಮಾಲಿನ್ಯ ನಿಯಮಾವಳಿ, ರಾಜ್ಯ ಹೈಕೋರ್ಟ್ ಆದೇಶದ ಅಂಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ.
ಎಲ್ಲಾ ರೀತಿಯ ನಿಯಮಗಳನ್ನು ಪಾಲಿಸುವುದು ದೇವಸ್ಥಾನ ಆಡಳಿತ ಮಂಡಳಿಯ ಸಂಪೂರ್ಣ ಜವಾಬ್ದಾರಿಯಾಗಿದೆ ಎಂದು ಆದೇಶದಲ್ಲಿ ಉಲ್ಲೇಖವಾಗಿದೆ.
2022ರ ನವೆಂಬರ್ 15ರಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಹೊರಡಿಸಿದ್ದ ಆದೇಶದಲ್ಲಿ ಯಕ್ಷಗಾನವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ 10 ಗಂಟೆಯಿಂದ ರಾತ್ರಿ 12.30ರವರೆಗೆ ವಿಸ್ತರಣೆ ಮಾಡಲಾಗಿತ್ತು. ಆದರೆ ಜಿಲ್ಲಾಧಿಕಾರಿಯವರ ಆದೇಶವನ್ನು ಪ್ರಶ್ನಿಸಿ ಕೃಷ್ಣಕುಮಾರ್ ಎಂಬುವವರು ಹೈಕೋರ್ಟ್ ನ ಮೆಟ್ಟಿಲೇರಿದ್ದರು. ಈ ಕುರಿತಂತೆ 2023ರ ನವೆಂಬರ್ 28ರಂದು ಹೈಕೋರ್ಟ್ ಹೊರಡಿಸಿದ್ದ ಆದೇಶದಲ್ಲಿ ಯಕ್ಷಗಾನ ಮೇಳದ ಪ್ರದರ್ಶನ ಅವಧಿ ಕುರಿತಂತೆ ಅರ್ಜಿದಾರರು ಸೂಕ್ತ ಪ್ರಸ್ತಾವನೆ ವಹಿಸಿ ಜಿಲ್ಲಾಧಿಕಾರಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರೂ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ.
ಜನವರಿ 14ರ ಬಳಿಕ ರಾತ್ರಿ ಪೂರ್ತಿ ಯಕ್ಷಗಾನ ನಡೆಸಲು ದೇವಸ್ಥಾನ ಆಡಳಿತ ಸಮಿತಿ ಈಗಾಗಲೇ ತೀರ್ಮಾನಿಸಿದ್ದು, ಈ ಕುರಿತಂತೆ ಪತ್ರ ಹೊರಡಿಸಿದೆ.