ಉಡುಪಿ, ಜ 10(DaijiworldNews/SK): ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಜ. 22 ರಂದು ನೆರವೆರಲಿದ್ದು, ಈ ಅದ್ಭುತ ಕ್ಷಣದಲ್ಲಿ ಸಾವಿರರು ಭಕ್ತರು ಪಾಲ್ಗೊಳ್ಳಲಿದ್ದಾರೆ. ಆದರೆ ಕರಾವಳಿ ಭಾಗದಿಂದ ಅಲ್ಲಿಗೆ ತೆರಳುವ ಭಕ್ತರಿಗೆ ಹಾಗೂ ಪ್ರವಾಸಿಗರಿಗೆ ಯಾವುದೇ ನೇರ ರೈಲುಗಳು ಇಲ್ಲದಿರುವುದು ಕರಾವಳಿ ಜನರ ಬೇಸರಕ್ಕೆ ಕಾರಣವಾಗಿದೆ.
ಭಾರತೀಯ ರೈಲ್ವೆ ಈಗಾಗಲೇ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ದೇಶದ ವಿವಿಧ ಭಾಗಗಳಿಂದ ಅಯೋಧ್ಯೆಗೆ ನೇರ ರೈಲು ಸಂಪರ್ಕವನ್ನು ಆರಂಭಿಸಿದೆ. ಕರ್ನಾಟಕದಲ್ಲಿ ಮೈಸೂರು, ಹುಬ್ಬಳ್ಳಿ ಮತ್ತು ಬೆಂಗಳೂರು ಮೂಲಕ ಅಯೋಧ್ಯೆಗೆ ರೈಲು ಸಂಪರ್ಕ ಮಾಡಲು ಉದ್ದೇಶಿಸಿದೆ.
ಆದರೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಂದ ಅಯೋಧ್ಯೆ ಯಾತ್ರೆ ಕೈಗೊಳ್ಳುವ ಭಕ್ತರಿಗೆ ನೇರ ಸಂಪರ್ಕ ವ್ಯವಸ್ಥೆ ಇಲ್ಲ. ಕರಾವಳಿ ಭಾಗದವರು ಮುಂಬಯಿಗೆ ತೆರಳಿ ಅಲ್ಲಿಂದ ಅಯೋಧ್ಯೆಗೆ ತೆರಳಬೇಕು. ಇಲ್ಲವೇ ಬೆಂಗಳೂರಿಗೆ ತೆರಳಿ ರೈಲುಗಳನ್ನು ಹಿಡಿಯಬೇಕು. ಇದರಿಂದ ಸಮಯ ವ್ಯರ್ಥದ ಜೊತೆಗೆ ವೆಚ್ಚವು ಹೆಚ್ಚಳವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ತಮಿಳುನಾಡು -ಅಯೋಧ್ಯೆ ಎಕ್ಸ್ಪ್ರೆಸ್ ಮಂಗಳೂರು ಜಂಕ್ಷನ್ ನಿಲ್ದಾಣದ ಮೂಲಕ ಹಾದುಹೋಗಲಿದ್ದರೂ ಇದರಿಂದ ಕರಾವಳಿಯ ಪ್ರಯಾಣಿಕರಿಗೆ ಯಾವುದೇ ರೀತಿಯ ಅನುಕೂಲವಿಲ್ಲ. ಈ ರೈಲು ಕೇರಳ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಹೆಚ್ಚಿನ ಸೀಟುಗಳನ್ನು ಅಲ್ಲಿನವರೇ ಕಾಯ್ದಿರಿಸುವುದರಿಂದ ಕರಾವಳಿ ಜನರಿಗೆ ಸೀಟು ಸಿಗುವುದೇ ಅನುಮಾನ. ಕನಿಷ್ಠ ವಾರದಲ್ಲಿ ಒಂದು ದಿನವಾದರೂ ಕರಾವಳಿ ಭಾಗದಿಂದ ಉಡುಪಿ ಮಾರ್ಗವಾಗಿ ಅಯೋಧ್ಯೆಗೆ ನೇರ ರೈಲು ಸಂಪರ್ಕ ಒದಗಿಸಬೇಕು ಎಂದು ಕರಾವಳಿ ಜನರು ಮನವಿ ಮಾಡಿದ್ದಾರೆ.