ಮಂಗಳೂರು, ಜ 09 (DaijiworldNews/MS): ಜರ್ಮನಿಯ ಡ್ರಸ್ಡೆನ್ನಿನ ಇನ್ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಕೆಮಿಸ್ಟ್ರಿ ಯ ನಿರ್ದೇಶಕರಾಗಿ ಮಂಗಳೂರು ಮೂಲದ ಪ್ರೊ. ಅಂಜನಾದೇವಿಯವರು ಆಯ್ಕೆಯಾಗಿದ್ದಾರೆ. ಈ ಕುರಿತು ಜರ್ಮನಿಯ ಲೈಬ್ನಿಚ್ ಘನ ಸ್ಥಿತಿ ಮತ್ತು ವಸ್ತುಗಳ ಸಂಶೋಧನಾ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು ತನ್ನ ಹಿರಿಯ ಡಾಕ್ಟರಲ್ ವಿದ್ಯಾರ್ಥಿಗಳಲ್ಲಿ ಜರ್ಮನಿಯಲ್ಲಿ ಇಂತಹ ಉನ್ನತ ಹುದ್ದೆಯನ್ನು ಅಲಂಕರಿಸಿರುವವರಲ್ಲಿ ಪ್ರೊ. ದೇವಿಯವರು ಮೊದಲನೆಯವರಾಗಿದ್ದಾರೆ ಎಂದು ಶ್ಲಾಘಿಸಿದೆ. ಪ್ರೊ. ದೇವಿಯವರು ಮಂಗಳೂರು ವಿಶ್ವವಿದ್ಯಾನಿಲಯದ ವಸ್ತು ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಥಮ ರ್ಯಾಂಕ್ ನೊಂದಿಗೆ ತೇರ್ಗಡೆಗೊಂಡು ಸಾಧನೆಗೈದಿದ್ದರು. ಹಾಗೂ ಗೇಟ್ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದರು.
ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮೆಟೀರಿಯಲ್ಸ್ ರಿಸರ್ಚ್ ಸೆಂಟರ್ ನಲ್ಲಿ ಪಿಎಚ್ ಡಿ ಪದವಿಯನ್ನು ಪಡೆದಿದ್ದರು. ಬೋಚಮ್ ರೂರ್ ವಿಶ್ವವಿದ್ಯಾನಿಲಯದಲ್ಲಿ ಪ್ರತಿಷ್ಠಿತ ಅಲೆಕ್ಸಾಂಡರ್ ವಾನ್ ಹ್ಯೂಮ್ಬೋಲ್ಟ್ ಸ್ಕಾಲರ್ಶಿಪ್ ನೊಂದಿಗೆ ಉನ್ನತ ಡಾಕ್ಟರಲ್ ಸಂಶೋಧನೆ ನಡೆಸಿ 2002 ರಿಂದ ಅಲ್ಲಿಯೇ ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದರು.
ಜರ್ಮನಿಯ ಪ್ರತಿಷ್ಠಿತ ಐಎಫ್ ಡಬ್ಲ್ಯೂ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾಗಿರುವ ಪ್ರೊ. ದೇವಿಯವರನ್ನು ಮಂಗಳೂರು ವಿಶ್ವವಿದ್ಯಾನಿಲಯದ ವಸ್ತುವಿಜ್ಞಾನ ವಿಭಾಗವು ಅಭಿನಂದಿಸಿ ವಿಭಾಗದ ಹಿರಿಯ ವಿದ್ಯಾರ್ಥಿಯ ಸಾಧನೆಯು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಹಾಗೂ ವಸ್ತುವಿಜ್ಞಾನ ಸ್ನಾತಕೋತ್ತರ ಪದವಿ ವಿಷಯದ ಪ್ರಾಮುಖ್ಯತೆಯನ್ನು ದೇಶ ವಿದೇಶ ಮಟ್ಟದಲ್ಲಿ ಸಾಕ್ಷೀಕರಿಸಿದೆ ಎಂದು ಅಭಿಪ್ರಾಯ ಪಟ್ಟಿದೆ. ಪ್ರೊ. ದೇವಿಯವರು ಮಂಗಳೂರಿನ ದಿ. ಕೆ. ಪಿ. ಭಾಸ್ಕರ ಮತ್ತು ಎಂ. ವಜ್ರಾಕ್ಷಿ ಇವರ ಪುತ್ರಿಯಾಗಿದ್ದಾರೆ.