ಸುಳ್ಯ, ಜ 09 (DaijiworldNews/AA): ಚಿರತೆಯು ಸಾಕು ಪ್ರಾಣಿಗಳನ್ನು ಕೊಂದು ತಿನ್ನುತ್ತಿರುವ ಘಟನೆ ಸುಳ್ಯ ತಾಲೂಕಿನ ಅರಂತೋಡು ಪರಿಸರದಲ್ಲಿ ಆಗಾಗ ವರದಿಯಾಗುತ್ತಿದೆ.
ಅಡ್ಕಬಳೆ ನಿವಾಸಿ ಲೀಲಾವತಿ ಎಂಬುವವರು ತಮ್ಮ ಮನೆಯ 2 ವರ್ಷದ ಕರುವೊಂದನ್ನು ಭಾನುವಾರ ತೋಟದಲ್ಲಿ ಮೇಯಲು ಬಿಟ್ಟಿದ್ದರು. ಸಂಜೆಯಾದರೂ ಅದು ಮನೆಗೆ ಮರಳಿ ಬಾರದ ಹಿನ್ನೆಲೆ ತೋಟಕ್ಕೆ ಹೋಗಿ ಹುಡುಕಾಡಿದಾಗ ಅರ್ಧ ತಿಂದ ಸ್ಥಿತಿಯಲ್ಲಿ ಕರುವಿನ ಮೃತದೇಹ ಪತ್ತೆಯಾಗಿದ್ದು, ಚಿರತೆ ದಾಳಿಯಿಂದ ಕರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಅಷ್ಟೇ ಅಲ್ಲದೆ ಶನಿವಾರ ರಾತ್ರಿ ಅವರದ್ದೇ ಹಟ್ಟಿಯಲ್ಲಿ ಕಟ್ಟಿ ಹಾಕಿದ್ದ ಆಡುಗಳ ಮೇಲೆ ಚಿರತೆ ದಾಳಿ ನಡೆಸಿ,1 ಆಡನ್ನು ತಿಂದುಹಾಕಿದ್ದು, 2 ಆಡುಗಳನ್ನು ಕೊಂದು ಹಾಕಿತ್ತು. ಸುಳ್ಯದ ಅರಂತೋಡು, ಮರ್ಕಂಜ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಜನರು ಓಡಾಡಲು ಭಯ ಪಡುವಂತ ಸ್ಥಿತಿ ಉಂಟಾಗಿದೆ. ಇನ್ನು ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುವಂತೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.