ಉಡುಪಿ, ಜ 08 (DaijiworldNews/HR): ಧಾರ್ಮಿಕ ವಿಚಾರ ಧಾರ್ಮಿಕ ವ್ಯಕ್ತಿಗಳಿಗೆ ಸಂಬಂಧಪಟ್ಟದ್ದು ಹಾಗಾಗಿ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಧರ್ಮ ಎನ್ನುವುದು ದೇಶಾತೀತ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪುತ್ತಿಗೆ ಮಠದ ಪರ್ಯಾಯ ವಿರುದ್ಧ ಪಿಎಎಲ್ ಅರ್ಜಿ ವಜಾ ಕುರಿತು ಪ್ರತಿಕ್ರಿಯಿಸಿದ ಅವರು, ಕೃಷ್ಣನ ಅನುಗ್ರಹ ಇದ್ದರೆ ಎಲ್ಲವೂ ಒಳ್ಳೆಯದಾಗುತ್ತದೆ. ನ್ಯಾಯಮೂರ್ತಿಗಳು ಒಳ್ಳೆಯ ವಿಚಾರವನ್ನೇ ಹೇಳಿದ್ದಾರೆ. ನಾವು ಯಾವುದೇ ದೈಶಿಕ ವಿಚಾರಕ್ಕೆ ಒಳಪಟ್ಟವರಲ್ಲ. ಆಧ್ಯಾತ್ಮಿಕ ವಿಚಾರ ಗಡಿ ದಾಟಿ ಇರಬೇಕು. ದೈಶಿಕ ನಿರ್ಬಂಧಕ್ಕೆ ಧಾರ್ಮಿಕ ವಿಚಾರ ಒಳಗಾಗಬಾರದು. ಯಾವುದೇ ಬ್ಯಾರಿಗೇಟ್ ಇರಬಾರದು, ಒಳ್ಳೆಯ ವಿಚಾರ ಎಲ್ಲಾ ಕಡೆ ಪಸರಿಸಬೇಕು ಎಂದರು.
ಇನ್ನು ಸದ್ವಿಚಾರಗಳು ಪ್ರಪಂಚದಲ್ಲಿ ವ್ಯಾಪ್ತವಾಗಬೇಕು. ಆಧ್ಯಾತ್ಮಿಕ ವಿಚಾರ ವಿಶ್ವವ್ಯಾಪಿ ಆಗಬೇಕು. ಧಾರ್ಮಿಕ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಲ್ಲ ಎಂದಿರುವುದು ಒಳ್ಳೆಯ ವಿಚಾರ. ಧಾರ್ಮಿಕ ವಿಚಾರ ಧಾರ್ಮಿಕ ವ್ಯಕ್ತಿಗಳಿಗೆ ಸಂಬಂಧಪಟ್ಟದ್ದು, ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಧರ್ಮ ಎನ್ನುವುದು ದೇಶಾತೀತ, ಪ್ರಪಂಚದಾದ್ಯಂತ ಹಿಂದುಗಳಿದ್ದಾರೆ ಎಂದು ಹೇಳಿದ್ದಾರೆ.