ಕುಂದಾಪುರ, ಜ 08 (DaijiworldNews/MS): ಕೇವಲ ಭಾರತ ಮಾತ್ರ ಅಲ್ಲ, ಪ್ರಪಂಚವೇ ಮೆಚ್ಚುವ ನಾಯಕ ನರೇಂದ್ರ ಮೋದಿ.ಇದಕ್ಕೆ ಮಾಲ್ಡಿವ್ಸ್ ನಲ್ಲಿ ನಡೆದ ಬೆಳವಣಿಗೆಯೇ ಸಾಕ್ಷಿ. ಮೋದಿಯವರನ್ನು ಟೀಕಿಸಿದ ಮೂವರು ಸಚಿವರನ್ನು ಅಲ್ಲಿಯ ಸರ್ಕಾರ ಅಮಾನತು ಮಾಡಿದೆ. ಇದು ಮೋದಿಯವರಿಗಿರುವ ಮನ್ನಣೆ. ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡಲು ಜನರು ಬಯಸಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಅವರು ಹೆಮ್ಮಾಡಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಕುಮಾರ ಬಂಗಾರಪ್ಪ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ, ಶಿವಮೊಗ್ಗ ಲೋಕಸಭೆ ಅಭ್ಯರ್ಥಿಯಾಗುತ್ತಾರೆ ಅನ್ನುವುದು ಸುಳ್ಳು ಸುದ್ದಿ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನಮ್ಮ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಂಗ್ರೆಸ್ಗೆ ಅಭ್ಯರ್ಥಿಗಳ ಕೊರತೆ ಏನು ಇರಲಿಕ್ಕಿಲ್ಲ ಎಂದವರು ತಿಳಿಸಿದರು.
ಸುಕುಮಾರ್ ಶೆಟ್ರು ಬೈಂದೂರು ಕ್ಷೇತ್ರದಲ್ಲಿ ಪಕ್ಷ, ಸಂಘಟನೆಗೆ ಶಕ್ತಿ ತುಂಬಿದವರು. ಇತ್ತೀಚೆಗೆ ಕಾರ್ಯಕರ್ತರ ಮದುವೆಗೆ ಬಂದಾಗ ಸಿಕ್ಕಿದ್ದು, ಅವರಿಂದ ಆಶೀರ್ವಾದ ಪಡೆದಿದ್ದೇನೆ. ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಅವರನ್ನೇ ಕೇಳಬೇಕು. ಆದರೆ ಅವರು ನಮ್ಮನ್ನು ಬಿಟ್ಟು ಹೋಗಲ, ಅವರ ಮಾರ್ಗದರ್ಶನ ನಮ್ಮೊಂದಿಗೆ ಇರುತ್ತೆ ಅನ್ನುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಬಸವನಗೌಡ ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ಸಮಯ - ಸಂದರ್ಭ ನೋಡಿಕೊಂಡು, ಅವರನ್ನು ಕರೆಸಿ ಮಾತನಾಡುವ ಕೆಲಸ ಮಾಡುತ್ತೆ ಅನ್ನುವ ವಿಶ್ವಾಸವಿದೆ. ಅವರು ಮಾಡಿರುವ ಆರೋಪಗಳಿಗೆಲ್ಲ ಪಕ್ಷವೇ ಆದಷ್ಟು ಬೇಗ ಉತ್ತರ ಕೊಡುತ್ತೆ ಎಂದರು.
ಪ್ರಧಾನಿ ಮೋದಿ ಬಗ್ಗೆ ಟೀಕೆ ಮಾಲ್ಡಿವ್ಸ್ನ ಸಚಿವರು ಟೀಕೆ ಮಾಡಿದ್ದಕ್ಕೆ ಅಲ್ಲಿನ ಸರಕಾರವೇ ಅವರನ್ನು ವಜಾ ಮಾಡಿದೆ. ಇದು ನಮ್ಮ ಪ್ರಧಾನಿ ಬಗ್ಗೆ ವಿಶ್ವದೆಲ್ಲೆಡೆ ಇರುವಂತಹ ಅಭಿಮಾನಕ್ಕೆ ಸಾಕ್ಷಿ. ನಾವು ಮಾಡಿರುವಂತಹ ಕೆಲಸವನ್ನು ಜನರ ಬಳಿಗೆ ತೆಗೆದುಕೊಂಡು ಹೋಗಿ, ಆ ಮೂಲಕ ಜನರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತೇವೆ. ಎಲ್ಲ ಶಾಸಕರ ಸಹಕಾರದಿಂದ ಉತ್ತಮ ಕಾರ್ಯ ಮಾಡುತ್ತಿದ್ದೇವೆ. ಸಂಘಟನೆ ಅವಕಾಶ ಕೊಟ್ಟರೆ ಖಂಡಿತ ಮತ್ತೊಮ್ಮೆ ಸ್ಪರ್ದಿಸುತ್ತೇನೆ. ಗೆಲ್ಲುವ ವಿಶ್ವಾಸವಿದೆ ಎಂದರು.
ನೇರ ರೈಲಿಗೆ ಪ್ರಯತ್ನ
ಜ.22 ಕ್ಕೆ ದೇಶದ ಕೋಟ್ಯಾಂತರ ಜನರ ಕನಸು ನನಸಾಗುವ ದಿನ. ಆ ದಿನ ರಾಮ ಮಂದಿರ ಉದ್ಘಾಟನೆಯಾಗಲಿದ್ದು, ಅಯೋಧ್ಯೆಗೆ ಈ ಕಡೆಯಿಂದ ನೇರ ರೈಲು ವ್ಯವಸ್ಥೆ ಕಲ್ಪಿಸುವ ಬಗ್ಗೆ ಪ್ರಯತ್ನಿಸಲಾಗುವುದು. ದೇಶದ ಎಲ್ಲ ಕಡೆಯಿಂದಲೂ ರಸ್ತೆ, ವಿಮಾನ, ರೈಲು ಸಂಪರ್ಕ ಕುರಿತಂತೆ ಕೇಂದ್ರ ಸರಕಾರ ಕಾರ್ಯಪ್ರವೃತ್ತರಾಗಲಿದೆ ಎಂದ ಅವರು, ಮುಂಬಯಿಗೆ ವಂದೇ ಭಾರತ್ ರೈಲು ಸಂಪರ್ಕಕಕ್ಕೆ ಮುಂದಿನ ಬಾರಿ ಖಂಡಿತ ಪ್ರಯತ್ನಿಸುವೆ. ಸೇನಾಪುರ ನಿಲ್ದಾಣದಲ್ಲಿ ಎಕ್ಸ್ಪ್ರೆಸ್ ರೈಲು ನಿಲುಗಡೆ ಕುರಿತು ಸಂಬಂಧಪಟ್ಟ ಕೇಂದ್ರದ ಅಧಿಕಾರಿಗಳ ಬಳಿಯೂ ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕುಂದಾಪುರ - ಬಂದೂರು ಹೆದ್ದಾರಿ ಕಾಮಗಾರಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಅಲ್ಲಲ್ಲಿ ಮೇಲ್ಸೆತುವೆ, ಬಪಾಸ್, ಅಂಡರ್ಪಾಸ್ ಹೀಗೆ ಸುಮಾರು ೧೦ ಕಾಮಗಾರಿಗಳ ಬಗ್ಗೆ ವಿಶೇಷ ಅನುದಾನಕ್ಕಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಭೇಟಿಯಾಗಿ ಕೊಟ್ಟಿದ್ದೇವೆ. ಶಾಸಕರಿಗೂ ಬಂದಂತಹ ಮನವಿಗಳನ್ನು ಇಲಾಖೆಗೆ ಸಲ್ಲಿಸಲಾಗಿದೆ. ಇದಕ್ಕೆ ಪ್ರತ್ಯೇಕ ಅನುದಾನ ನೀಡುವುದಾಗಿ ಸಚಿವರು ಒಪ್ಪಿಕೊಂಡಿದ್ದು, ಆ ಬಗ್ಗೆ ವಿಶ್ವಾಸವಿದೆ ಎಂದ ಸಂಸದರು, ಹೆದ್ದಾರಿ ಪ್ರಾಽಕಾರಕ್ಕೆ ೬ ತಿಂಗಳಿಗೊಬ್ಬರು ಯೋಜನಾ ನಿರ್ದೇಶಕರು ಬದಲಾಗುತ್ತಿದ್ದಾರೆ. ಹೀಗೆ ಆದರೆ ಕಾಮಗಾರಿಯನ್ನು ಹೇಗೆ ಕಾರ್ಯ ರೂಪಕ್ಕೆ ತರುವುದು. ಈ ಬಗ್ಗೆ ಸಚಿವ ಗಡ್ಕರಿ ಅವರ ಗಮನಕ್ಕೂ ತರಲಾಗಿದೆ ಎಂದು ಬಿ.ವೈ. ರಾಘವೇಂದ್ರ ಹೇಳಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮತ್ತಿತರರಿದ್ದರು.