ಉಪ್ಪಿನಂಗಡಿ, ಜ 8(DaijiworldNews/AA): ತನ್ನ ಇಳಿವಯಸ್ಸಿನಲ್ಲಿ ಮಕ್ಕಳಿಗೆ ಬೇಡವಾಗಿ ಅನಾಥಾಶ್ರಮ ಸೇರಿದ್ದ ವೃದ್ಧೆಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ಭಾನುವಾರ ವರದಿಯಾಗಿದೆ.
ಲಕ್ಷ್ಮೀ ಹೆಗ್ಡೆ (90) ನಿಧನ ಹೊಂದಿದ ವೃದ್ಧೆ.
ಲಕ್ಷ್ಮೀ ಅವರಿಗೆ 7 ಮಕ್ಕಳಿದ್ದು, ಅವರ್ಯಾರೂ ಪಾರ್ಥಿವ ಶರೀರದ ಅಂತಿಮ ಕಾರ್ಯಕ್ಕೆ, ಅಂತಿಮ ದರ್ಶನಕ್ಕೆ ಆಗಮಿಸಿಲ್ಲ. ಆದ್ದರಿಂದ ಅನಾಥಾಶ್ರಮದವರೇ ಲಕ್ಷ್ಮೀ ಅವರ ಅಂತ್ಯಸಂಸ್ಕಾರ ಮಾಡಿರುವುದಾಗಿ ತಿಳಿದುಬಂದಿದೆ.
ಲಕ್ಷ್ಮೀ ಅವರು ಉಪ್ಪಿನಂಗಡಿ ಬಳಿಯ ಇಳಂತಿಲದಲ್ಲಿ ಸ್ವಂತ ಮನೆ ಹೊಂದಿದ್ದರು. ವೃದ್ಧಾಪ್ಯದಲ್ಲಿ ಮಕ್ಕಳಿಗೆ ಬೇಡವಾಗಿ, ನ್ಯಾಯ ದೊರಕಿಸಿ ಕೊಡುವಂತೆ ಪೊಲೀಸರ ಮೊರೆಹೋಗಿದ್ದರು. ಪೊಲೀಸರು ತಾಯಿಯನ್ನು ನೋಡಿಕೊಳ್ಳಿ. ಮಕ್ಕಳ ಕರ್ತವ್ಯ ನಿರ್ವಹಿಸಿ ಎಂದು ಲಕ್ಷ್ಮೀ ಅವರ ಮಕ್ಕಳಿಗೆ ಸೂಚಿಸಿದ್ದು, ಮಕ್ಕಳು ಅದಕ್ಕೆ ಕ್ಯಾರೆ ಎನ್ನದೆ ತಾಯಿಯನ್ನು ದೂರ ತಳ್ಳಿದ್ದರು.
ಬಳಿಕ ಆಗಿನ ಠಾಣಾಧಿಕಾರಿ ನಂದ ಕುಮಾರ್ ಲಕ್ಷ್ಮೀ ಹೆಗ್ಡೆ ಅವರನ್ನು ಕನ್ಯಾನದ ಭಾರತ್ ಸೇವಾಶ್ರಮಕ್ಕೆ ಸೇರಿಸಿದ್ದಾರೆ. ಅಷ್ಟೇ ಅಲ್ಲದೆ, ಲಕ್ಷ್ಮೀ ಅವರ ಮಗನ ಸ್ಥಾನದಲ್ಲಿ ನಿಂತು ಆಶ್ರಮಕ್ಕೆ ಆಗಾಗ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸುತ್ತಿದ್ದರು.
ಇನ್ನು ಲಕ್ಷ್ಮೀ ಅವರು ಭಾನುವಾರ ಹೃದಯಾಘಾತದಿಂದ ಮೃತಪಟ್ಟ ಬಳಿಕ ಶರೀರದ ಅಂತಿಮ ಕಾರ್ಯ ನೆರವೇರಿಸಲು ಕುಟುಂಬದವರಿಗೆ ಕರೆ ಮಾಡಿದಾಗ ಯಾವುದೇ ಸ್ಪಂದನೆ ದೊರೆತಿಲ್ಲ. ಬಳಿಕ ಅವರ ಮಕನಂತೆ ಆರೈಕೆ ಮಾಡಿದ್ದ ಪೊಲೀಸ್ ಅಧಿಕಾರಿ ನಂದಕುಮಾರ್ ಅವರನ್ನು ಸಂಪರ್ಕಿಸಿದ್ದು, ಅವರು ಕರ್ತವ್ಯದ ಕಾರಣಕ್ಕೆ ದೂರದಲ್ಲಿದ್ದ ಕಾರಣ ಅವರನ್ನು ತಲುಪಲು ಸಾಧ್ಯವಾಗಿರಲ್ಲಿ. ಆದ್ದರಿಂದ ಅನಾಥಾಶ್ರಮದ ಕ್ರಮದಂತೆ ಆಶ್ರಮದವರೇ ಲಕ್ಷ್ಮೀ ಅವರ ಅಂತಿಮಸಂಸ್ಕಾರ ನೆರವೇರಿಸಿದ್ದಾರೆ.