ಪಿಣರಾಯಿ ಸರ್ಕಾರದ ಶ್ರೀಮಂತ ಸಚಿವ ಎಂದೆಣಿಸಿಕೊಂಡಿರುವ ಥೋಮಸ್ ಚಾಂಡಿ ಬುಧವಾರ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಭೂ ಅತಿಕ್ರಮಣ ನಡೆಸಿದ ಪ್ರಕರಣದಲ್ಲಿ ಸಿಲುಕಿದ್ದ ಸಾರಿಗೆ ಸಚಿವ ಥೋಮಸ್ ಚಾಂಡಿ ಸೇರಿ ಪಿಣರಾಯಿ ನೇತೃತ್ವದ ಎಡರಂಗ ಸರ್ಕಾರದ ಮೂರನೇ ಸಚಿವರು ನಿರ್ಗಮನವಾದಂತಾಗಿದೆ.ಅಲಾಪ್ಪುಝಾ ಜಿಲ್ಲಾಧಿಕಾರಿ ಕೇರಳ ಹೈಕೋರ್ಟ್ ನಲ್ಲಿ ಸಚಿವ ಥೋಮಸ್ ಚಾಂಡಿ ವಿರುದ್ಧ ದೂರು ದಾಖಲಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಸಚಿವ ಚಾಂಡಿ ಸರ್ಕಾರದ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದರು. ಜಿಲ್ಲಾಧಿಕಾರಿಯವರು ಸಂವಿಧಾನ ವಿರೋಧಿಯಾಗಿ ನಡೆದುಕೊಂಡಿರುವುದಾಗಿ ಚಾಂಡಿ ಆರೋಪಿಸಿದ್ದರು. ಆದರೆ ಕೇರಳ ಹೈಕೋರ್ಟ್ ಮಂಗಳವಾರ ಚಾಂಡಿ ಅವರ ಅರ್ಜಿಯನ್ನು ವಜಾಗೊಳಿಸಿ, ತರಾಟೆಗೆ ತೆಗೆದುಕೊಂಡಿತ್ತು. ಇದರೊಂದಿಗೆ ಜಿಲ್ಲಾಧಿಕಾರಿಯವರ ವರದಿಯ ಅಂಶವನ್ನು ಎತ್ತಿಹಿಡಿದಿತ್ತು.ಈ ಹಿಂದೆ ಸಂಬಂಧಿಕರಿಗೆ ಸರಕಾರೀ ಹುದ್ದೆ ನೀಡಿದ ಆರೋಪದಂತೆ ಸಿಪಿಎಂ ಸಚಿವ ಜಯರಾಜನ್ ರಾಜೀನಾಮೆ ನೀಡಿದ್ದರು. ಲೈಂಗಿಕ ಹಗರಣದಲ್ಲಿ ಎನ್.ಸಿ.ಪಿ.ಯ ಎ.ಕೆ.ಶಶೀಂದ್ರನ್ ರಾಜೀನಾಮೆ ನೀಡಿದ್ದರು. ಶಶೀಂದ್ರರು ರಾಜೀನಾಮೆ ನೀಡಿದ ಹುದ್ದೆಗೆ ಅದೇ ಪಕ್ಷದ ಥೋಮಸ್ ಚಾಂಡಿ ಸಚಿವರಾಗಿ ಸೇರ್ಪಡೆಗೊಂಡಿದ್ದರು.