ಸುಳ್ಯ, ಜ 7 (DajiworldNews/SK): ಒಂಟಿ ಸಲಗವೊಂದು ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಸ್ಥಳೀಯರ ಕೃಷಿ ನಾಶಗೊಳಿಸಿದ ಘಟನೆ ಜ. 5 ರಂದು ಸುಳ್ಯದ ಜಾಲ್ಸೂರು ಗ್ರಾಮದ ಕೆಮನಬಳ್ಳಿ ಪರಿಸರದಲ್ಲಿ ನಡೆದಿದೆ.
ಕೆಮನಬಳ್ಳಿಯ ನಿವಾಸಿ ಜಯಾನಂದ ಅವರ ತೋಟಕ್ಕೆ ಕಾಡಾನೆ ಲಗ್ಗೆ ಇಟ್ಟು, ಆರು ತೆಂಗಿನ ಸಸಿಗಳನ್ನು ಹಾನಿಗೊಳಿಸುವುದರ ಜೊತೆಗೆ ಜಯಾನಂದರ ತಂದೆಯ ಸ್ಮಾರಕವನ್ನು ತುಳಿದು ದ್ವಂಸ ಮಾಡಿದೆ. ಸ್ಥಳೀಯ ಸದಾನಂದ ಮಣಿಯಾಣಿ ಅವರ ತೋಟದಲ್ಲಿ ಬೇಲಿ, ಜ್ಯೋತಿರಾಣಿ ಅವರ ಮನೆಯ ತಂತಿಬೇಲಿ ನಾಶಮಾಡಿದೆ. ಪಂಜಿಕಲ್ಲು, ಮುರೂರು ಹಾಗೂ ಬೆಳ್ಳಿಪ್ಪಾಡಿ ಭಾಗದಲ್ಲಿ ಕೃಷಿಕರ ತೋಟಕ್ಕೆ ಹಾನಿ ಮಾಡುತ್ತಿದ್ದ ಒಂಟಿ ಸಲಗ ಅಲ್ಲಿಂದ ಕನಕಮಜಲು ದೇರ್ಕಜೆ, ಕುಧ್ಕುಳಿ, ಕಾಪಿಲ, ಮುಗೇರು , ಪೆರ್ನಾಜೆ, ಪೆರ್ಲಂಪಾಡಿ, ಕೊಳ್ತಿಗೆ ಮೂಲಕ ಇದೀಗ ಕೆಮನಬಳ್ಳಿಗೆ ತಲುಪಿದ್ದು, ಅಲ್ಲಿ ಕೃಷಿಕರ ನಿದ್ದೆಗೆಡಿಸುತ್ತಿದೆ ಎಂದು ವರದಿಯಾಗಿದೆ.
ಇನ್ನು ಕೆಮನಬಳ್ಳಿ ಫಾಲ್ಸ್ ಸಮೀಪದ ಕಾಡಿನಲ್ಲಿ ಹಗಲು ಹೊತ್ತಿನಲ್ಲಿ ಈ ಒಂಟಿ ಆನೆ ಬಿಡಾರ ಹೂಡಿದ್ದು, ರಾತ್ರಿ ವೇಳೆ ಕೃಷಿಕರ ತೋಟಕ್ಕೆ ದಾಳಿ ನಡೆಸುತ್ತಿದೆ ಎಂದು ಸ್ಥಳೀಯರು ದೂರಿನಲ್ಲಿ ಮಾಹಿತಿ ನೀಡಿದ್ದಾರೆ.