ಉಡುಪಿ, ಜ 06 (DaijiworldNews/AK):ಬಿಜೆಪಿಯ ಧ್ವನಿ ಗಟ್ಟಿಯಾಗಿರುವುದರಿಂದಲೇ ಮುಖ್ಯಮಂತ್ರಿಗಳು ರಿಯಾಕ್ಟ್ ಮಾಡುತ್ತಿದ್ದಾರೆ. ಒಬ್ಬ ಸಾಮಾನ್ಯ ಕರ ಸೇವಕನ ಬಗ್ಗೆ ಮುಖ್ಯಮಂತ್ರಿಯೇ ಪ್ರತಿಕ್ರಿಯಿಸಿದ್ದಾರೆ. ಗೃಹ ಸಚಿವರೇ ಹೊರಬಂದು ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯ ಧ್ವನಿ ಗಟ್ಟಿಯಾಗಿತ್ತು ಹಾಗಾಗಿ ಪ್ರತಿಕ್ರಿಯೆ ಸುತ್ತಿದ್ದಾರೆ” ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್ ಆಶೋಕ್ ಕಿಡಿಕಾರಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು “ಇನ್ನು ಮುಂದೆ ನಮಗೆ ಉಳಿಗಾಲ ಇಲ್ಲ ಅನ್ನೋದು ಅರಿವಾಗಿದೆ. ಖರ್ಗೆ ಅವರೇ ನಿಮಗೆ ಇದೆಲ್ಲ ಬೇಕಾಗಿತ್ತಾ ಎಂದು ಕೇಳಿದ್ದಾರೆ. ವಿರೋಧ ಪಕ್ಷದ ಧ್ವನಿ ಜಾಸ್ತಿಯಾಗಿದೆ ಅನ್ನೋದು ಕಾಂಗ್ರೆಸ್ಸಿಗೆ ಗೊತ್ತಾಗಿದೆ. ಕಾಂಗ್ರೆಸಿಗೆ ನಡುಕ ಶುರುವಾಗಿದೆ” ಎಂದರು.
ಯತ್ನಾಳ್ ಗೆ ಮಾತನಾಡದಂತೆ ತಾಕೀತು ಮಾಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು “ಈ ತರದ ಬೆಳವಣಿಗೆಗಳು ಸರ್ವೇಸಾಮಾನ್ಯ. ಎಲ್ಲವೂ ಸರಿ ಹೋಗುತ್ತದೆ. 25 ಸ್ಥಾನಗಳನ್ನು ಗೆಲ್ಲುವತ್ತ ಎಲ್ಲರ ದೃಷ್ಟಿ ಇದೆ. ಎಲ್ಲಾ ತ್ಯಾಗಕ್ಕೂ ಪಕ್ಷದ ಕಾರ್ಯಕರ್ತರು ಮುಖಂಡರು ಸಿದ್ಧರಿದ್ದಾರೆ. ಮೋದಿ ಪ್ರಧಾನಿ ಆದರೆ ದೇಶಕ್ಕೆ ಒಳಿತು” ಎಂದರು.
“ಎಲ್ಲಾ ಜ್ಯೋತಿಷಿಗಳು ಕಾಂಗ್ರೆಸ್ ಸರ್ಕಾರ ಪತನ ಆಗುತ್ತೆ ಎಂದು ಹೇಳಿದ್ದಾರೆ. ಸರಕಾರದಲ್ಲಿ ಒಡಕು , ಇಬ್ಬಾಗ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಎರಡೂವರೆ ವರ್ಷ ನಾನೇ ಮುಂದುವರೆಯುತ್ತೇನೆ ಅಂತಾರೆ. ಡಿಕೆ ಶಿವಕುಮಾರ್ ನಾನು ಮುಂದಿನ ಸಿಎಂ ಅಂತಾರೆ. ಎಲ್ಲಾ ಫ್ರೀ ಕೊಟ್ಟು ಅಭಿವೃದ್ಧಿ ಮಾಡಲು ದುಡ್ಡಿಲ್ಲ” ಎಂದರು.