ಮಂಗಳೂರು, ಜ 05 (DaijiworldNews/AK): ದುರ್ಬಲ ಬುಡಕಟ್ಟು ಸಮುದಾಯದವರ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಅಭಿಯಾನ (ಪಿಎಂ ಜನಮನ್) ಯೋಜನೆಯಡಿ ಅಭಿವೃದ್ಧಿ ಮಿಷನ್ ಪ್ರಾರಂಭಿಸಲಾಗಿದ್ದು, ಇದರ ಯಶಸ್ವಿಗೆ ಎಲ್ಲ ಅಧಿಕಾರಿಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಕುಮಾರ್ ತಿಳಿಸಿದ್ದಾರೆ.
ಅವರು ಈ ಸಂಬಂಧ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲ ಇಲಾಖೆಗಳು ಪರಿಶಿಷ್ಟ ಪಂಗಡದ ಕೊರಗ ಸಮುದಾಯಕ್ಕೆ ಸಂಬಂಧಿಸಿದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಹುಡುಕಿ ಯೋಜನೆಯ ಲಾಭವನ್ನು ತಲುಪಿಸಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ವಿವಿಧ ಇಲಾಖೆಗಳು ಫಲಾನುಭವಿ ಆಧಾರಿತ ಯೋಜನೆಗಳನ್ನು ಕೊರಗ ಸಮುದಾಯದವರಿಗೆ ಆದ್ಯತೆಯಲ್ಲಿ ನೀಡಬೇಕು. ತಾಲೂಕು ಮಟ್ಟದ ಅಧಿಕಾರಿಗಳು ತಹಶೀಲ್ದಾರ್ ಗಳೊಂದಿಗೆ ನಿಟ್ಟಿನಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಕೇಂದ್ರ-ರಾಜ್ಯ ಸರಕಾರಗಳು ನೀಡುವ ಎಲ್ಲ ಯೋಜನೆಗಳನ್ನು ಮನೆ-ಮನೆ ಸರ್ವೇ ನಡೆಸಿ, ಕೊರಗ ಸಮುದಾಯಕ್ಕೆ ತಲುಪಿಸಲು ಅವರು ಸೂಚಿಸಿದರು.
ಸಭೆಯಲ್ಲಿ ಐಟಿಡಿಪಿ ಅಧಿಕಾರಿ ಶಿವಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಜಿಲ್ಲೆಗೆ ಆಗಮಿಸಿ ಬುಡಕಟ್ಟು ಸಮುದಾಯದ ಯೋಜನೆಯ ಅನುಷ್ಠಾನದ ಪರಿಶೀಲನೆ ನಡೆಸಲಿದ್ದಾರೆ, ಈ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು, ಫಲಾನುಭವಿ ಆಧಾರಿತ ಸೌಲಭ್ಯಗಳನ್ನು ಸಮಗ್ರವಾಗಿ ಜಾರಿಗೊಳಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಜಿ., ಜಿಲ್ಲಾ ಆರೋಗ್ಯಧಿಕಾರಿ ಡಾ. ತಿಮ್ಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉಪನಿರ್ದೇಶಕ ಉಸ್ಮಾನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.