ಉಡುಪಿ, ಜ 05 (DaijiworldNews/ AK): ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಆಯೋಜಿಸುವ ಬೃಹತ್ ಮಕ್ಕಳ ಯಕ್ಷೋತ್ಸವವಾದ ಕಿಶೋರ ಯಕ್ಷಗಾನ ಸಂಭ್ರಮ-2023ದ ಸಮಾರೋಪ ಇಂದು ಜನವರಿ 5, 2023 ಕುಂದಾಪುರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಕಿಶೋರ ಯಕ್ಷಗಾನ ಸಂಭ್ರಮವು ಡಿಸೆಂಬರ್ 7, 2023 ರಂದು ಆರಂಭಗೊಂಡಿದ್ದು, ಉಡುಪಿ, ಬ್ರಹ್ಮಾವರ, ಶಿರ್ವ, ಕಾಪು, ಕೋಟ, ಕುಂದಾಪುರ- ಹೀಗೆ ಉಡುಪಿ ಜಿಲ್ಲೆಯ ಆರು ಕಡೆಗಳಲ್ಲಿ ಆಯೋಜಿಸಲಾಯಿತು.
ಕಿಶೋರ ಯಕ್ಷಗಾನ ಸಂಭ್ರಮದ ಪ್ರಧಾನ ಸಂಯೋಜಕ ಮತ್ತು ಯಕ್ಷ ಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ಮುರಲಿ ಕಡೆಕಾರ್ ಅವರು ಈ ಮಹಾಕಲಾ ಅಭಿಯಾನದ ಯಶಸ್ಸಿನ ಕುರಿತು ಮಾತನಾಡುತ್ತ, ‘ಈ ಬಾರಿಯ ಕಿಶೋರ ಯಕ್ಷಗಾನ ಸಂಭ್ರಮದಲ್ಲಿ 2500 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದು ಇದರಲ್ಲಿ ಸರ್ವಧರ್ಮೀಯರೂ ಇದ್ದಾರೆ, ಹುಡುಗರಿಗಿಂತ ಅಧಿಕ ಹುಡುಗಿಯರೇ ಇದ್ದಾರೆ. ಉತ್ತರಕರ್ನಾಟಕದ ಕಡೆಯವರೂ ಇದ್ದಾರೆ. ಹೊರರಾಜ್ಯದವರೂ ಇದ್ದಾರೆ. ಕಳೆದ ನಾಲ್ಕು ತಿಂಗಳಿನಲ್ಲಿ ಮೂವತ್ತೊಂದು ಮಂದಿ ಸಮರ್ಥ ಗುರುಗಳು 69 ಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಿದ್ದು, ಒಟ್ಟು 70 ಕಥಾನಕಗಳ ಪ್ರದರ್ಶನ ನಡೆದಿದೆ. ಈ ಕಿಶೋರ ಯಕ್ಷಗಾನ ಸಂಭ್ರಮವು ವಿದ್ಯಾರ್ಥಿಗಳಲ್ಲಿ ಯಕ್ಷಗಾನ ಕಲೆಯ ಕುರಿತ ಆಸಕ್ತಿಯನ್ನು ಹೆಚ್ಚಿಸುವುದಲ್ಲದೆ. ಭಾರತೀಯ ಪುರಾಣ ಪರಂಪರೆಯ ಕುರಿತ ಅರಿವನ್ನು ಹೆಚ್ಚಿಸುವುದು’ ಎಂದರು.
ಯಕ್ಷಗಾನ ಮತ್ತು ಶಿಕ್ಷಣ ಕ್ಷೇತ್ರದ ಅಭ್ಯುತ್ಥಾನಕ್ಕಾಗಿ ಶ್ರಮಿಸುತ್ತಿರುವ ಯಕ್ಷಗಾನ ಕಲಾರಂಗ [ರಿ.] ಸಂಸ್ಥೆಯು ಉಡುಪಿ ವಿಧಾನಸಭಾಕ್ಷೇತ್ರದ ಅಂದಿನ ಶಾಸಕ ಕೆ. ರಘುಪತಿ ಭಟ್ಟರ ಬೆಂಬಲದೊಂದಿಗೆ ‘ಯಕ್ಷಶಿಕ್ಷಣ ಟ್ರಸ್ಟ್’ನ್ನು 2007 ರಲ್ಲಿ ಆರಂಭಿಸಿದ್ದು, ಈ ವರ್ಷದ ಬೃಹತ್ ಮಕ್ಕಳ ಯಕ್ಷೋತ್ಸವದ ಮುಂದಾಳತ್ವವನ್ನು ಉಡುಪಿ, ಕಾಪು ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಗಳ ಶಾಸಕರಾದ ಅನುಕ್ರವಾಗಿ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ ಶೆಟ್ಟಿ ಮತ್ತು ಕಿರಣ್ ಕೋಡ್ಗಿಯವರು ವಹಿಸಿದ್ದಾರೆ.
ಯಕ್ಷಶಿಕ್ಷಣ ಟ್ರಸ್ಟ್ ಆರಂಭಗೊಂಡಂದಿನಿಂದ ಇಂದಿನವರೆಗೆ ಸುಮಾರು 25,000 ವಿದ್ಯಾರ್ಥಿಗಳು ಯಕ್ಷಗಾನ ತರಬೇತಿ ಪಡೆದಿದ್ದು ಅವರಲ್ಲಿ ಹೆಚ್ಚಿನವರು ಈಗಲೂ ಕಲಾವಿದರಾಗಿ, ಸಂಘಟಕರಾಗಿ, ಪ್ರಜ್ಞಾವಂತ ಪ್ರೇಕ್ಷಕರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.