ಕೋಟ, ಜ 05 (DaijiworldNews/MS): ವಿಶ್ವ ವಿಖ್ಯಾತ ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕರಲ್ಲಿ ಒಬ್ಬರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಂಗತ ಕಾರ್ಕಡ ಶ್ರೀನಿವಾಸ ಉಡುಪರ ನೆನಪಿನಲ್ಲಿ ಸಾಲಿಗ್ರಾಮ ಮಕ್ಕಳ ಮೇಳ ಟ್ರಸ್ಟ್ ಕೊಡಮಾಡುವ 2023-24 ರ ಸಾಲಿನ ಉಡುಪ ಪ್ರಶಸ್ತಿಗೆ ಕೋಟ ಅಮೃತೇಶ್ವರಿ ಮೇಳದ ಯಕ್ಷಗಾನ ಕಲಾವಿದ, ಮಟ್ಪಾಡಿ ತಿಟ್ಟಿನ ಕೋಟ ಸುರೇಶ್ ಬಂಗೇರ ಭಾಜನರಾಗಿದ್ದಾರೆ.
ಯಕ್ಷಗಾನದ ದಂತಕತೆ ಶಿರಿಯಾರ ಮಂಜು ನಾಯ್ಕರ ಮಾತುಗಾರಿಕೆ, ಗುರು ವೀರಭದ್ರ ನಾಯ್ಕ್ ಹೆಜ್ಜೆಗಾರಿಕೆ, ಮೊಳಹಳ್ಳಿ ಹಿರಿಯ ನಾಯ್ಕ್ ರ ರಂಗತಂತ್ರಗಳನ್ನು ಮೈಗೂಡಿಸಿಕೊಂಡು ಪ್ರಸಿದ್ದ ಪುರುಷ ವೇಷಧಾರಿಯಾಗಿ ಗುರುತಿಸಿಕೊಂಡು ಇದೀಗ ಯಕ್ಷರಂಗದಲ್ಲಿ ಎರಡನೆ ವೇಷದಲ್ಲಿ ಮಿಂಚುತ್ತಿರುವ ಸುರೇಶ್ರು ಸುಧನ್ವ, ಪುಷ್ಕಳ, ಶುಭ್ರಾಂಗ, ಮಾರ್ತಾಂಡತೇಜ, ಅರ್ಜುನ, ಕೃಷ್ಣ, ತಾಮ್ರಧ್ವಜ, ಪರಶುರಾಮ ಮೊದಲಾದ ಪಾತ್ರಗಳಲ್ಲದೆ ಹೊಸ ಪ್ರಸಂಗಗಳಲ್ಲೂ ಸೈ ಎನಿಸಿ, ಸೌಕೂರು, ಸಾಲಿಗ್ರಾಮ, ಪೆರ್ಡೂರು, ಕಮಲಶಿಲೆ, ಅಮೃತೇಶ್ವರಿ ಮೊದಲಾದ ಮೇಳಗಳಲ್ಲಿ ಸುಮಾರು 36 ವರ್ಷಗಳ ಕಾಲ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಮುಂದಿನ ತಿಂಗಳು ಅಂದರೆ ಫೆಬ್ರುವರಿ 11ರ ಆದಿತ್ಯವಾರ ಕೋಟದ ಪಟೇಲರ ಮನೆಯ ಆವರಣದಲ್ಲಿ ಗಣ್ಯರ ಸಮಕ್ಷಮದಲ್ಲಿ ಹತ್ತು ಸಹಸ್ರ ಮೊತ್ತದೊಂದಿಗೆ ಸುರೇಶ್ ಅವರನ್ನು ಗೌರವಿಸಲಾಗುವುದೆಂದು ಸ್ಥಾಪಕ ನಿರ್ದೇಶಕ ಎಚ್. ಶ್ರೀಧರ ಹಂದೆ, ಟ್ರಸ್ಟ್ ಕಾರ್ಯಾಧ್ಯಕ್ಷ ಮಹೇಶ್ ಉಡುಪ ಎಂ., ಅಧ್ಯಕ್ಷ ಬಲರಾಮ ಕಲ್ಕೂರ, ಉಪಾಧ್ಯಕ್ಷ ಜನಾರ್ದನ ಹಂದೆಯವರನ್ನೊಳಗೊಂಡ ಪ್ರಶಸ್ತಿ ಸಮಿತಿ ನಿರ್ಣಯಿಸಿದೆ ಎಂದು ಕಾರ್ಯದರ್ಶಿ ಎಚ್. ಸುಜಯೀಂದ್ರ ಹಂದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.