ಮಂಗಳೂರು, ಜ 04 (DaijiworldNews/AA): ನೀರಿನ ಬಿಲ್ ಸಮಸ್ಯೆಗಳನ್ನು ಇತ್ಯರ್ಥ ಮಾಡುವ ಉದ್ದೇಶದಿಂದ ಲಾಲ್ ಬಾಗ್ ನ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಬುಧವಾರ ಸಭೆ ನಡೆಸಲಾಯಿತು.
ಈ ವೇಳೆ ನಾಲ್ಕೈದು ವರ್ಷಗಳಿಂದ ಬಿಲ್ ಬಾರದೆ ಒಂದೇ ಬಾರಿಗೆ ಸಾವಿರಾರು ಮೊತ್ತದ ಬಿಲ್, ಮೀಟರ್ ದುರಸ್ತಿ ಪಡಿಸಿದರೂ ಅಸರ್ಮಪಕ ಬಿಲ್, ಲಕ್ಷಾಂತರ ರೂ. ಬಾಕಿಯ ಬಿಲ್ ಹೀಗೆ ನಾನಾ ರೀತಿಯ ಸಮಸ್ಯೆಗಳ ದೂರು ಅರ್ಜಿಗಳೊಂದಿಗೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸರತಿ ಸಾಲಿನಲ್ಲಿ ಅಹವಾಲು ಸಲ್ಲಿಸುವ ಪ್ರಕ್ರಿಯೆಗೆ ಸಾಕ್ಷಿಯಾದರು.
ಸಭೆಯಲ್ಲಿ ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಹಾಜರಿದ್ದು, ಜನರಿಂದ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಇತ್ಯರ್ಥಪಡಿಸಲು ಸಾಧ್ಯವಾಗುವ ಪ್ರಕರಣಗಳಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕಳೆದ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರನೇಕರು ನೀರಿನ ಬಿಲ್ ಮನೆಗಳಿಗೆ ಪ್ರತಿ ತಿಂಗಳು ನೀಡಲಾಗುತ್ತಿಲ್ಲ. ನೀಡಿದ ಬಿಲ್ನಲ್ಲಿ ನೂರಾರು ಪಟ್ಟು ಹೆಚ್ಚಿನ ಮೊತ್ತ, 12000ಕ್ಕೂ ಅಧಿಕ ಮೀಟರ್ಗಳು ಎಂಎನ್ ಆರ್ (ಮೀಟರ್ ನಾಟ್ ರೀಡಿಂಗ್) ಆಗಿವೆ. ಬಿಲ್ ಗಳಲ್ಲಿ ಸಾಕಷ್ಟು ಲೋಪದೋಷಗಳು ಇವೆ ಎಂಬುದಾಗಿ ದೂರಿದ್ದರು. ಆ ಸಂದರ್ಭ ನೀರಿನ ಬಿಲ್ ನ ಪರಿಷ್ಕರಣೆಯ ಸಭೆ ಮಾಡುವುದಾಗಿ ಹೇಳಿದಂತೆ ಪತ್ರಿಕಾ ಪ್ರಕಟಣೆಯ ಮೂಲಕ ಸಮಸ್ಯೆ ಇರುವವರು ಅಹವಾಲು ಸಲ್ಲಿಸಲು ತಿಳಿಸಲಾಗಿತ್ತು ಎಂದರು.
ದೂರುಗಳನ್ನು ಪರಿಶೀಲಿಸಿ ಸ್ಥಳದಲ್ಲಿಯೇ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಈ ವ್ಯವಸ್ಥೆ ಮಾಡಲಾಗಿದೆ. ತಂತ್ರಾಂಶದಲ್ಲಿನ ದೋಷದಿಂದ ಅಧಿಕ ಮೊತ್ತದ ಬಿಲ್ಗಳನ್ನು ಸ್ಥಳದಲ್ಲಿಯೇ ಪರಿಷ್ಕರಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ಬುಧವಾರ ಸುರತ್ಕಲ್ ವಲಯ ಕಚೇರಿಯಲ್ಲಿ ಈ ಅಹವಾಲು ಸ್ವೀಕಾರ ನಡೆಯಲಿದೆ. ಮಾತ್ರವಲ್ಲದೆ ಈ ಕಾರ್ಯ ಮುಂದಿನ ಎರಡು ತಿಂಗಳಿಗೊಮ್ಮೆ ನಡೆಸಲಾಗುವುದು ಎಂದು ಮೇಯರ್ ತಿಳಿಸಿದರು.
ಈ ಸಭೆಯಲ್ಲಿ ಮನಪಾ ವ್ಯಾಪ್ತಿಯಲ್ಲಿ ಮಹಿಳೆಯೋರ್ವರು ನಡೆಸುತ್ತಿದ್ದ ಗಂಜಿ ಊಟದ ಹೋಟೆಲ್ ಗೆ ನೀರಿನ ಮೀಟರ್ ಬಿಲ್ ಬರೋಬ್ಬರಿ 32,176 ರೂ. ಬಂದಿದ್ದು, ಮಹಿಳೆ ಈ ಬಿಲ್ ಕಂಡು ಶಾಕ್ ಆಗಿದ್ದರೂ ಸಹ ಬಿಲ್ ಕಟ್ಟಲು ಮುಂದಾಗಿದ್ದಾರೆ. ಅನಾರೋಗ್ಯದ ಹಿನ್ನಲೆ ಹೋಟೆಲ್ ಸರಿಯಾಗಿ ಕಾರ್ಯಾಚರಿಸುತ್ತಿರಲಿಲ್ಲ, ವಾರಕ್ಕೊಮ್ಮೆ ಮಾತ್ರ ಕಾರ್ಯಾಚರಿಸ್ತಾ ಇತ್ತು ಎನ್ನಲಾಗಿದೆ. ಈ ಹಿಂದೆ ವಾಟರ್ ಬಿಲ್ ತಿಂಗಳಿಗೆ 400 ರೂ. ನಂತೆ ಬರುತ್ತಿದ್ದು, ಆದರೆ ಏಕಾಏಕಿ ಇಷ್ಟೊಂದು ಮೊತ್ತದ ಬಿಲ್ ಬಂದಿರುವುದನ್ನ ಕಂಡು ಶಾಕ್ ಆದ ಮಹಿಳೆ ಮನಪಾ ಅಧಿಕಾರಿಗಳನ್ನು ಭೇಟಿಯಾಗಿ ತನ್ನ ಹೋಟೆಲ್ ನ ನೀರಿನ ಸಂಪರ್ಕವನ್ನು ಕಡಿತಗೊಳಿಸುವಂತೆ ಮನವಿ ಮಾಡಿಕೊಂಡಿದ್ದೆ. ಆದರೆ ಅಧಿಕಾರಿಗಳು ಮಾತ್ರ ಬಾಕಿ ಇರುವ 32,176 ರೂ. ಬಿಲ್ ಪಾವತಿಸದೆ ನೀರಿನ ಮೀಟರ್ ಕಡಿತಗೊಳಿಸಲು ಸಾಧ್ಯವಿಲ್ಲ ಎಂದಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಅಧಿಕಾರಿಗಳ ಕಿರುಕುಳಕ್ಕೆ ಬೆದರಿದ ಮಹಿಳೆ ಸುಮಾರು 20,000 ರೂ. ಬಿಲ್ ಪಾವತಿ ಮಾಡಿದ್ದಾರೆ. ಆದರೂ ಸಹ ಬಿಲ್ ಸಂಪೂರ್ಣವಾಗಿ ಪಾವತಿಯಾಗದೆ ಮೀಟರ್ ಸಂಪರ್ಕ ಕಡಿತಗೊಳಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಮತ್ತೆ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಅಂತಿಮವಾಗಿ ಬುಧವಾರ ನಡೆದ ನೀರಿನ ಬಿಲ್ ಸಮಸ್ಯೆಯ ಇತ್ಯರ್ಥ ಸಭೆಯಲ್ಲಿ ಮಹಿಳೆ ಮನಪಾ ಮೇಯರ್ ಗಮನಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.
ಈ ಸಭೆಯಲ್ಲಿ ಉಪ ಮೇಯರ್ ಸುನೀತಾ, ಕಾರ್ಪೊರೇಟರ್ ಶೈಲೇಶ್, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.