ಮಂಗಳೂರು,ಏ21(Daijiworld News/AZM):ಮದುವೆಯಾಗಿ ಕೇವಲ ಒಂದು ವಾರವಾಗಿದ್ದ ಮದುಮಗ ಸಂಶಯಾಸ್ಪದವಾಗಿ ಸಾವನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು,ಕೊಲೆಮಾಡಿರುವುದಾಗಿ ಶಂಕಿಸಲಾಗಿದೆ.
ಕಳೆದ ಆದಿತ್ಯವಾರ ಮದುವೆಯಾಗಿದ್ದ ನವವಿವಾಹಿತ ಮದುಮಗ ಬಜಾಲ್ ನಂತೂರ್ ಫೈಸಲ್ ನಗರ ನಿವಾಸಿ ಮಿಕ್ದಾದ್ ರವರು ಕಳೆದ ಶುಕ್ರವಾರದಿಂದ ಕಾಣೆಯಾಗಿದ್ದರು. ಹಲವಾರು ಕಡೆ ಹುಡುಕಾಡಿದ ನಂತರ ಮರುದಿನ ಶನಿವಾರ ರಾತ್ರಿ ವಳಚ್ಚಿಲ್ ನೇತ್ರಾವತಿ ನದಿ ಪಕ್ಕದಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು ಕೆಲವು ಅನುಮಾನಗಳನ್ನು ಹುಟ್ಟು ಹಾಕಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮರಣೋತ್ತರ ವರದಿ ಬಂದ ನಂತರವೇ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ.
ಏ.14ರಂದು ಕಳೆದ ಭಾನುವಾರ ಎಸ್ ಕೆ ಎಸ್ ಎಸ್ ಎಫ್ ಸಂಶುಲ್ ಉಲಮಾ ಕ್ರಿಯಾ ಸಮಿತಿಯ ವತಿಯಿಂದ ನಡೆದಿದ್ದ ಸಾಮೂಹಿಕ ವಿವಾಹದಲ್ಲಿ ಸಜಿಪ ಎಂಬಲ್ಲಿನ ಯುವತಿಯನ್ನು ಮಿಕ್ದಾದ್ ರವರು ವಿವಾಹವಾಗಿದ್ದರು. ಸಾವಿಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.