ಮಂಗಳೂರು, ಜ 03 (DaijiworldNews/AA): ಕಳೆದ 18 ವರ್ಷಗಳಿಂದ ದೈವಾರಾಧನೆ ಸ್ಥಗಿತಗೊಂಡ ಜಾಗದಲ್ಲಿ ಹುಲಿ ಹೆಜ್ಜೆಯ ಗುರುತು ಕಂಡು ಬಂದು ದೈವಾರಾಧಕರಲ್ಲಿ ಅಚ್ಚರಿ ಮೂಡಿಸಿದ ಘಟನೆ ಮಂಗಳೂರು ಎಂಆರ್ ಪಿಎಲ್ ಸಮೀಪದ ಕಾಯರ್ ಕಟ್ಟೆಯಲ್ಲಿ ನಡೆದಿದೆ.
ಪೆರ್ಮುದೆಯ ಪಿಲಿಚಾಮುಂಡಿ ದೈವಸ್ಥಾನದ ಅಭಿವೃದ್ಧಿ ಕಾಮಗಾರಿ ಹೊತ್ತಲ್ಲಿ ಕೆಲಸ ಮಾಡುತಿದ್ದ ಸ್ಥಳೀಯ ಯುವಕರಿಗೆ ದೈವಸ್ಥಾನದ ಮೇಲೆ ಹಾಗೂ ಮಣ್ಣಿನಲ್ಲಿ ಹುಲಿ ಹೆಜ್ಜೆ ಗುರುತು ಕಂಡುಬಂದಿದೆ. ದೈವಸ್ಥಾನದ ಜಾಗದಲ್ಲಿ ಸಾರ್ವಜನಿಕವಾಗಿ ಹುಲಿ ಯಾರಿಗೂ ಕಾಣಿಸದೇ ಇದ್ದರೂ ಎಂಆರ್ ಪಿಎಲ್ ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಹುಲಿ ಓಡಾಟದ ದೃಶ್ಯ ಕಂಡುಬಂದಿದೆ. ಹೀಗಾಗಿ ಈ ಹೆಜ್ಜೆ ಗುರುತುಗಳು ಪಿಲಿಚಾಮುಂಡಿ ದೈವದ ಜೊತೆಗೆ ನಂಟು ಹೊಂದಿರುವ ವ್ಯಾಘ್ರನದ್ದು, ಇದು ಹುಲಿ ರೂಪದಲ್ಲಿ ಕಾಣಿಸಿಕೊಂಡು ಜನರಿಗೆ ಅಭಯ ನೀಡಿದೆ ಎಂಬ ನಂಬಿಕೆ ಭಕ್ತರದ್ದು.
ಈ ದೈವವನ್ನು ತುಳುವರು ಬಹಳ ನಂಬಿಕೆಯಿಂದ ಪಿಲ್ಚಂಡಿ ಅಥವಾ ಪಿಲಿಚಾಮುಂಡಿ ಎಂದು ಕರೆಯುತ್ತಾರೆ. ಕನ್ನಡದಲ್ಲಿ ವ್ಯಾಘ್ರ ಚಾಮುಂಡಿ ಎಂದೂ ಕರೆಯಲಾಗುತ್ತದೆ. ಈ ದೈವವು ತುಳುನಾಡಿನ ಲಕ್ಷಾಂತರ ಜನರ ಸಾವಿರ ವರ್ಷಗಳ ನಂಬಿಕೆಯ ಪ್ರತೀಕವಾಗಿದ್ದು, ಈಶ್ವರ ದೇವರ ಅಪ್ಪಣೆ ಪ್ರಕಾರ ತುಳುನಾಡಿನ ಜನರನ್ನ ರಕ್ಷಿಸಲು ಭೂಮಿಗಿಳಿದು ಬಂದ ದೈವಶಕ್ತಿ ಎಂಬ ನಂಬಿಕೆ ಸಹ ಇದೆ.
ಇನ್ನು ಗ್ರಾಮಸ್ಥರು ಮತ್ತು ಎಂಆರ್ಪಿಎಲ್ ಸಹಕಾರದೊಂದಿಗೆ ಜನವರಿ 4ರಂದು ಅದ್ದೂರಿಯಾಗಿ ನೇಮೋತ್ಸವ ನಡೆಯಲಿದೆ. ಘಟನೆಯ ಬಳಿಕ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ನೇಮೋತ್ಸವ ನಡೆಸಲು ಸಿದ್ದತೆ ನಡೆಸಲಾಗುತ್ತಿದೆ.