ಬೆಳ್ತಂಗಡಿ, ಜ 2 (DaijiworldNews/SK): ಹೊಸವರ್ಷದ ಸಂಭ್ರಮಾಚರಣೆಯಲ್ಲಿ ಯುವಕರ ನಡುವೆ ಗಲಾಟೆಯಾಗಿ ಓರ್ವ ತನ್ನ ಗೆಳೆಯನ ಮೂಗನ್ನೇ ಕಚ್ಚಿ ತುಂಡರಿಸಿದ ಘಟನೆ ಡಿ. 31 ರಂದು ಬೆಳ್ತಂಗಡಿಯ ಪಿಲ್ಯದಲ್ಲಿ ನಡೆದಿದೆ.
ಪಿಲ್ಯ ಗ್ರಾಮದ ಉಲ್ಪೆ ಎಂಬಲ್ಲಿನ ನಿವಾಸಿ ದೀಕ್ಷಿತ್ (28) ಮೂಗು ತುಂಡರಿಸಿಕೊಂಡ ಯುವಕ ಎಂದು ಗುರುತಿಸಲಾಗಿದೆ.
ಮೂಲತಃ ಮೂಡಿಗೆರೆ ತಾಲೂಕಿನವನಾಗಿರುವ ರಾಕೇಶ್, ಪ್ರಸಕ್ತ ಪಿಲ್ಯ ಗ್ರಾಮದ ಸಂಬಂಧಿಕರ ಮನೆಯಲ್ಲಿ ವಾಸವಿದ್ದು, ಸ್ಥಳೀಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಆದರೆ ಡಿ. 31 ರಂದು ಹೊಸ ವರ್ಷಾಚರಣೆ ಸಂದರ್ಭ ಮದ್ಯ ಸೇವಿಸಿ ಕ್ಷುಲ್ಲಕ ವಿಚಾರದಲ್ಲಿ ಸ್ನೇಹಿತರ ನಡುವೆ ಗಲಾಟೆ ನಡೆದಿದೆ. ಬಳಿಕ ಗಲಾಟೆ ವಿಕೋಪಕ್ಕೆ ತಿರುಗಿ ದೀಕ್ಷಿತ್ ಮೂಗನ್ನು ರಾಕೇಶ್ ಬಲವಾಗಿ ಕಚ್ಚಿ ತುಂಡರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ದೀಕ್ಷಿತ್ನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಇನ್ನು ಈ ಬಗ್ಗೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.