ಕಾರ್ಕಳ,ಏ 20(Daijiworld News/MSP): ಎಪ್ರಿಲ್ 18 ರಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆ ಕಳೆದಿದ್ದರೂ, ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ತೆರೆಯಲಾಗಿರುವ ಚೆಕ್ಪೋಸ್ಟ್ಗಳಲ್ಲಿ ಅದರ ಕಾವು ಇನ್ನೂ ತಣಿಯಲಿಲ್ಲ. ಇದಕ್ಕೆ ಪ್ರಮುಖ ಕಾರಣ ಎಪ್ರಿಲ್ 23 ರಂದು ನಡೆಯಲಿರುವ ಶಿವಮೊಗ್ಗ ಲೋಕಸಭಾ ಚುನಾವಣೆಯಾಗಿದೆ.
ಉಡುಪಿಯ ಬೈಂದೂರು ವಿಧಾನಸಭಾ ಕ್ಷೇತ್ರವು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ವ್ಯಾಪ್ತಿಗೆ ಒಳಪಡುತ್ತಿದೆ. ಚುನಾವಣೆಯ ಪೂರ್ವದಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ತಾಲೂಕು ಕೇಂದ್ರ ವ್ಯಾಪ್ತಿಯಲ್ಲಿ ಹಲವು ಚೆಕ್ಪೋಸ್ಟ್ ತೆರೆಯಲಾಗಿತ್ತು. ಅದರಲ್ಲಿ ಕಾರ್ಕಳ ತಾಲೂಕು ವ್ಯಾಪ್ತಿಯ ಸಾಣೂರು, ಮಾಳ, ಹೊಸ್ಮಾರು, ಜಾರಿಗೆಕಟ್ಟೆ ಚೆಕ್ಪೋಸ್ಟ್ ಸೇರಿವೆ. ಅವುಗಳೆಲ್ಲರೂ ಎಪ್ರಿಲ್ 25ರ ವರೆಗೆ ಕಾರ್ಯಚರಿಸುವಂತೆ ಉಡುಪಿ ಜಿಲ್ಲಾಡಳಿತ ಅದೇಶ ನೀಡಿದೆ.
ದಿನವೊಂದಕ್ಕೆ ಇಬ್ಬರಂತೆ ಪೊಲೀಸರು ಹಾಗೂ ಮೂವರು ಚುನಾವಣಾ ಸಹಾಯಕ ಅಧಿಕಾರಿಗಳು ಚೆಕ್ಪೋಸ್ಟ್ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕೆಲಸ, ಇತರ ಕಾರ್ಯ ನಿಮಿತ್ತ ತೆರಳುವವರಿಗೆ ಹಾಗೂ ದೂರದ ಊರಿಗಳಿಗೆ ತೆರಳುವ ಪ್ರಯಾಣಿಕರು ತಮ್ಮ ವಾಹನಗಳನ್ನು ಚೆಕ್ ಪೋಸ್ಟ್ಗಳಲ್ಲಿ ನಿಲ್ಲಿಸಲೇ ಬೇಕಾದ ಪ್ರಮೇಯ ಎದುರಾಗುತ್ತಿದೆ. ಮಾತ್ರವಲ್ಲದೇ ಮಾಡದ ತಪ್ಪಿಗೆ ಆರೋಪಿಗಳಂತೆ ಉತ್ತರಿಸಬೇಕಾದ ಸನ್ನಿವೇಶಗಳು ಇದೇ ಚೆಕ್ಪೋಸ್ಟ್ಗಳಲ್ಲಿ ನಡೆಯುತ್ತಿರುವುದು ಸರ್ವೇ ಸಮಾನ್ಯವಾಗಿದೆ.