ಉಪ್ಪಿನಂಗಡಿ, ಡಿ 29 (DaijiworldNews/SK): ರಾತ್ರಿ ವೇಳೆ ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದ ಲಾರಿ ಚಾಲಕನೋರ್ವ ಲಾರಿಯಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಪ್ಪಿನಂಗಡಿಯ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ವರದಿಯಾಗಿದೆ.
ಮೃತ ಚಾಲಕರನ್ನು ರಾಮನಗರ ಜಿಲ್ಲೆಯ ಚೆನ್ನಪಟ್ಟಣದ ಖಲೀಲ್ ಖಾನ್ (58) ಎಂದು ಗುರುತಿಸಲಾಗಿದೆ.
ಮೈಸೂರಿನಿಂದ ಬಿ.ಸಿ.ರೋಡಿಗೆ ಹಾಸಿಗೆ ಲೋಡ್ ಎರಡು ದಿನಗಳ ಹಿಂದೆ ತಂದಿದ್ದ ಲಾರಿ ಚಾಲಕ ಖಲೀಲ್. ಲೋಡ್ ಖಾಲಿ ಮಾಡಿದ ಬಳಿಕ ರಾತ್ರಿ ವೇಳೆ ವಿಶ್ರಾಂತಿಗಾಗಿ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಲಾರಿ ನಿಲ್ಲಿಸಿ ಮಲಗಿದ್ದರು.
ಲಾರಿಯ ಕ್ಯಾಬಿನ್ ನ ಬಾಗಿಲು ಹಾಕಿದ್ದರಿಂದ ಚಾಲಕ ಲಾರಿಯೊಳಗೆ ಮೃತಪಟ್ಟಿದ್ದು, ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ, ಡಿ.29ರಂದು ಲಾರಿಯಿಂದ ಕೆಟ್ಟ ವಾಸನೆ ಬರಲಾರಂಭಿಸಿತ್ತು. ಈ ಹಿನ್ನಲೆಯಲ್ಲಿ ಸಂಶಯಗೊಂಡ ಸ್ಥಳೀಯರು ಲಾರಿಯನ್ನು ಪರಿಶೀಲನೆ ನಡೆಸಿದಾಗ ಲಾರಿ ಚಾಲಕನ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ನಂತರ ಲಾರಿ ಚಾಲಕನ ಮೃತ ದೇಹವನ್ನು ತೆಗೆದು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಮಾಹಿತಿ ಲಭಿಸಿದೆ.