ಬಂಟ್ವಾಳ, ಡಿ 29 (DaijiworldNews/MS): ಪಾದಚಾರಿ ಯುವತಿಯೋರ್ವಳಿಗೆ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವಳು ಮಧ್ಯರಾತ್ರಿ ವೇಳೆ ಮೃತಪಟ್ಟ ಘಟನೆ ನಡೆದಿದೆ.
ಬಿಸಿರೋಡಿನ ಕೈಕಂಬ ಸಮೀಪದ ಪಚ್ಚಿನಡ್ಕ ಎಂಬಲ್ಲಿ ರಾತ್ರಿ 8 ಗಂಟೆ ವೇಳೆ ಅಪಘಾತ ನಡೆದಿತ್ತು.
ಇಲ್ಲಿನ ಸ್ಥಳೀಯ ನಿವಾಸಿ ಚೈತ್ರ (22 ) ಮೃತಪಟ್ಟ ಯುವತಿ.
ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಚೈತ್ರ ಅವರು ಸಂಜೆ ಕೆಲಸ ಬಿಟ್ಟು ಬಸ್ ನಿಂದ ಇಳಿದು ತಾಯಿ ಜೊತೆಗೆ ಮನೆಯ ಕಡೆಯ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ ಎಂದು ಆರಂಭದಲ್ಲಿ ಹೇಳಲಾಗಿತ್ತು. ಸ್ನೇಹಿತೆಯೋರ್ವಳ ಮದುವೆಯ ರೋಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಹಿನ್ನಲೆಯಲ್ಲಿಈಕೆ ಕೆಲಸಕ್ಕೆ ರಜೆ ಪಡೆದುಕೊಂಡು ಸಂಜೆ ವೇಳೆ ಮನೆಯಿಂದ ತಾಯಿ ಜೊತೆ ನಡೆದುಕೊಂಡು ಹೋಗುತ್ತಿದ್ದಳು ಎಂದು ಸಂಬಂಧಿಕರು ತಿಳಿಸಿದ್ದಾರೆ.
ತಾಯಿ ಜೊತೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಸ್ವಿಪ್ಟ್ ಕಾರು ಇವಳಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಇವಳನ್ನು ಖಾಸಗಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಟ್ರಾಫಿಕ್ ಎ.ಎಸ್.ಐ.ಸುರೇಶ್ ಪಡಾರ್, ಹಾಗೂ ಹೆಚ್.ಸಿ.ರಮೇಶ್ ಅವರು ಖಾಸಗಿ ವಾಹನದ ಮೂಲಕ ಗಾಯಳು ಚೈತ್ರಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಗಂಭೀರವಾಗಿ ಗಾಯಗೊಂಡಿರುವ ಈಕೆ ತುರ್ತು ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು,ಆದರೆ ಮಧ್ಯ ರಾತ್ರಿ ಸುಮಾರು 1 ಗಂಟೆಗೆ ಈಕೆ ಮೃತಪಟ್ಟ ಬಗ್ಗೆ ವೈದ್ಯರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಪಾದಾಚಾರಿಗೆ ಡಿಕ್ಕಿ ಹೊಡೆದ ಕಾರು ಬಳಿಕ ನಿಯಂತ್ರಣ ಕಳೆದುಕೊಂಡು ಅಲ್ಲಿ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದು ,ಮನೆಯೊಂದರ ಕಾಂಪೌಂಡ್ ಗೆ ಕೂಡ ಗುದ್ದಿ ನಿಂತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾರು ಚಾಲಕ ಹಾಗೂ ಹಾಗೂ ಇವನ ಜೊತೆ ಇದ್ದ ಮೂವರು ಸಹಪ್ರಯಾಣಿಕ ಪರಾರಿಯಾಗಿದ್ದಾರೆ. ಮಲ್ಲೂರು ಕಡೆ ಹೋಗುವವರು ಎಂದು ಹೇಳಲಾಗಿದೆ.
ಮೆಲ್ಕಾರ್ ಟ್ರಾಫಿಕ್ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿದ್ದು,ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮದುವೆಗೆ ನಿಶ್ಚಿತಾರ್ಥ ನಡೆದಿತ್ತು. ಚೈತ್ರ ಅವಳು ಖ್ಯಾತ ಮೇಕಪ್ ಆರ್ಟಿಸ್ಟ್ ದಿ. ಭಾಸ್ಕರ್ ಆಚಾರ್ಯ ಅವರ ಮಗಳು. ಚೈತ್ರ ಮಂಗಳೂರಿನ ಪ್ರಸಿದ್ದ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ರಜಾ ಪಡೆದುಕೊಂಡಿದ್ದಳು. ಇವಳ ಸ್ನೇಹಿತಳ ರೋಸ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಉದ್ದೇಶದಿಂದ ತಾಯಿ ಜೊತೆ ಅವಳ ಮನೆಗೆ ಹೋಗುತ್ತಿದ್ದ ವೇಳೆ ಯಮಸ್ವರೂಪಿ ಕಾರು ಇವಳಿಗೆ ಡಿಕ್ಕಿ ಹೊಡೆದಿದೆ. ಚೈತ್ರಳಿಗೆ ನಿಶ್ಚಿತಾರ್ಥ ನಡೆದು ಮದುವೆಗೆ ದಿನ ನಿಗದಿಯಾಗಿದೆ. ಮಾ.3 ರಂದು ಕೊಡ್ಯಡ್ಕದ ಯುವಕನ ಜೊತೆ ಮದುವೆ ನಿಗದಿಯಾಗಿತ್ತು. ಇದೀಗ ಮದುವೆಯಾಗಿ ಗಂಡನ ಮನೆಗೆ ಹೋಗಬೇಕಿದ್ದ ಯುವತಿಯನ್ನು ಕಾರೊಂದು ಮಸಣ ಸೇರುವಂತೆ ಮಾಡಿದೆ.
ಗಾಂಜಾ ಸೇವಸಿದ್ದರಾ?
ಗಾಂಜಾ ಸೇವನೆ ಮಾಡಿ ಕಾರು ಓಡಿಸುತ್ತಿದ್ದುದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಈ ಬಗ್ಗೆ ಪೊಲೀಸರಿಗೆ ಸಂಬಂಧಿಕರು ದೂರು ನೀಡಿದ್ದು,ಪೋಲಿಸರು ತನಿಖೆ ನಡೆಸುತ್ತಿದ್ದಾರೆ.