ಮೂಡುಬಿದಿರೆ, ಏ 20(Daijiworld News/MSP): ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಒಂಟಿಕಟ್ಟೆಯಲ್ಲಿ ಮನೆಯೊಂದು ಬೆಂಕಿಗೆ ಅಹುತಿಯಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ಏ.19 ರ ಶುಕ್ರವಾರ ರಾತ್ರಿ ನಡೆದಿದೆ.
ತಾಹೀರಬಾನು ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಇದರಲ್ಲಿ ಸಾದಿಕ್ ಎಂಬವರು ವಾಸವಾಗಿದ್ದರು. ಸಾದಿಕ್ ಅವರ ಪತ್ನಿ 50 ದಿನಗಳ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದು ಈ ಹಿನ್ನಲೆಯಲ್ಲಿ ಸಾದಿಕ್ ಹಾಗೂ ಇಬ್ಬರು ಮಕ್ಕಳಾದ ಸಫಾ ಬಾನು, ಸಂಬ್ರೀನಾ ಬಾನು ಅವರೊಂದಿಗೆ ಕೋಟೆಬಾಗಿಲಿನ ಸಂಬಂಧಿಕರ ಮನೆಯಲ್ಲಿದ್ದರು.
ಮನೆಯ ವಿದ್ಯುತ್ ಸಂಪರ್ಕ ಹಲವು ದಿನಗಳ ಹಿಂದೆಯೇ ಕಡಿತಗೊಂಡಿದ್ದು, ಶುಕ್ರವಾರ ಸಂಜೆ ಮನೆ ಬಳಿ ಬಂದ ಸಾದಿಕ್ ರಾತ್ರಿ ೮ ರ ವೇಳೆಗೆ ಮನೆಯಲ್ಲಿ ಅಗರಬತ್ತಿ ಹಚ್ಚಿ ಸಂಬಂಧಿಕರ ಮನೆಗೆ ಹಿಂತಿರುಗಿದ್ದರು. ಅಗರಬತ್ತಿ ಕಿಡಿಯಿಂದ ಬೆಂಕಿ ಹಚ್ಚಿಕೊಂಡಿರುವ ಸಾಧ್ಯತೆ ಇದ್ದು, ಮನೆ ಸಂಪೂರ್ಣ ಭಸ್ಮವಾಗಿದೆ. ಬೆಂಕಿ ಅನಾಹುತದಿಂದ ಮನೆಯಲ್ಲಿದ್ದ ಟಿ.ವಿ , ಫ್ಯಾನ್ , ಕಪಾಟು, ಸೋಪಾ, ಬಟ್ಟೆ, ರೂ.4 ಸಾವಿರ ನಗದು, ದಾಖಲೆಗಳು ಭಸ್ಮವಾಗಿದೆ. ಮನೆಯ ಗೋಡೆಗಳೆಲ್ಲಾ ಬಿರುಕು ಬಿಟ್ಟಿದ್ದು ಘಟನೆಯಿಂದ ಮೂರು ಲಕ್ಷಕ್ಕೂ ಅಧಿಕ ನಷ್ಟವಾಗಿದೆ.
ಗ್ರಾಮ ಕರಣಿಕ ಹಾಗೂ ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.