ಮಂಗಳೂರು, ಡಿ 27 (DaijiworldNews/SK): ಎನ್ ಎಂ ಪಿ ಟಿ ಬಂದರಿನಿಂದ 9.5 ನಾಟಿಕಲ್ ಮೈಲಿ ದೂರದ ಸಮುದ್ರದಲ್ಲಿ ಲಂಗರು ಹಾಕಿದ್ದ ಲೈಬೀರಿಯಾ ಮೂಲದ ತೈಲ ಟ್ಯಾಂಕರ್ ಹಡಗಿನಲ್ಲಿ ಸಿಬ್ಬಂದಿಯೊರ್ವರು ತೀವ್ರ ಅನಾರೋಗ್ಯಕ್ಕಿಡಾಗಿದ್ದು ಅವರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿರುವುದಾಗಿ ವರದಿಯಾಗಿದೆ.
ಎಂಟಿ ಐವರಿ ರೇ ಎಂಬ ಹೆಸರಿನ ಹಡಗಿನಲ್ಲಿದ್ದ ಸಿಬ್ಬಂದಿಯೋರ್ವರು ಮಂಗಳವಾರ ರಾತ್ರಿ ವಾಶ್ ರೂಮಿನಲ್ಲಿದ್ದಾಗ ಕುಸಿದು ಬಿದ್ದಿದ್ದಾರೆ. ಕೂಡಲೇ ಕರ್ನಾಟಕದ ಕೋಸ್ಟ್ ಗಾರ್ಡ್ ಸಿಬ್ಬಂದಿಗೆ ರಕ್ಷಣೆ ಕೋರಿ ಮಧ್ಯರಾತ್ರಿ ಕರೆ ಬಂದಿತ್ತು.
ಇನ್ನು ತುರ್ತಾಗಿ ಸ್ಪಂದಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ತಡರಾತ್ರಿ ಬೋಟಿನಲ್ಲಿ ವೈದ್ಯರೊಂದಿಗೆ ಹಡಗಿನ ಬಳಿ ತೆರಳಿ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿಬ್ಬಂದಿಗೆ ತುರ್ತು ಚಿಕಿತ್ಸೆ ನೀಡಿದ್ದಾರೆ.
ಬಳಿಕ ಅವರನ್ನು ಮಂಗಳೂರಿನ ಬಂದರಿಗೆ ಕರೆತಂದು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಐವರಿ ರೇ ಹಡಗು 13 ದಿನಗಳ ಹಿಂದೆ ಲೈಬೀರಿಯಾದಿಂದ ಕೆಂಪು ಸಮುದ್ರ ಮೂಲಕ ಮಂಗಳೂರಿನ ಬಂದರಿಗೆ ಆಗಮಿಸಿತ್ತು. ಮಂಗಳೂರು ಬಂದರಿನಲ್ಲಿ ಒಳಬರಲು ಸಿಗ್ನಲ್ ಸಿಗದೇ ಇದ್ದ ಕಾರಣ ಸಮುದ್ರ ಮಧ್ಯೆ ಲಂಗರು ಹಾಕಿತ್ತು ಎನ್ನಲಾಗಿದೆ.