ಮಂಗಳೂರು, ಎ20(Daijiworld News/SS): ಮಂಜೇಶ್ವರ ಸಮೀಪದ ಉದ್ಯಾವರ ಮಾಡದ ಶ್ರೀ ಅರಸು ಮಂಜಿಷ್ಣಾರ್ ದೈವಗಳು, ಉದ್ಯಾವರ ಸಾವಿರ ಜಮಾತ್ ಮಸೀದಿಗೆ ಭೇಟಿ ನೀಡುವ ಅಪೂರ್ವ ಧಾರ್ಮಿಕ ಕಾರ್ಯಕ್ರಮ ನಡೆದಿದೆ.
ಉದ್ಯಾವರ ಅರಸು ಮಂಜೀಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಸಲುವಾಗಿ ಪ್ರಾಚೀನ ಕಾಲದಿಂದಲೇ ನಡೆದುಕೊಂಡು ಬರುತ್ತಿರುವ ಅರಸು ದೈವಗಳ ಜಮಾತ್ ಭೇಟಿ ಇಂದಿಗೂ ಹಿಂದೂ ಮುಸ್ಲಿಂ ಭಾವೈಕ್ಯಕ್ಕೊಂದು ಪ್ರತೀಕವಾಗಿದೆ. ಮೇಷ ಸಂಕ್ರಮಣ ಕಳೆದು ಬರುವ ಮೊದಲ ಶುಕ್ರವಾರ ಈ ಅನುಷ್ಟಾನ ವಾಡಿಕೆಯಾಗಿದೆ. ಶುಕ್ರವಾರ ಮದ್ಯಾಹ್ನ ಉದ್ಯಾವರ ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವಗಳು ಮಸೀದಿ ತಲುಪಿದೆ.
ಹಿಂದೂ ಮುಸ್ಲಿಂ ಜಾತ್ರೆ ಎಂದೇ ಕರೆಯಲ್ಪಡುವ ಜೊತೆಗೆ ಭಾವೈಕ್ಯತೆಯ ಸಂಕೇತದೊಂದಿಗೆ ಕಳೆದ ಹಲವಾರು ವರುಷಗಳಿಂದ ರೂಢಿಯಲ್ಲಿರುವ ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಮಾಡ ದೈವ ಕ್ಷೇತ್ರದ ಜಾತ್ರೆಯ ಪೂರ್ವಭಾವಿಯಾಗಿ ಉದ್ಯಾವರ ಸಾವಿರ ಜಮಾತ್ ಮಸೀದಿಗೆ ದೈವ ಪಾತ್ರಿಗಳು ಭೇಟಿ ನೀಡಿ, ಬಳಿಕ ಜಮಾಅತಿನ ಸರ್ವ ಮುಸ್ಲಿಂ ಬಾಂಧವರನ್ನು ಜಾತ್ರೋತ್ಸವಕ್ಕೆ ಆಹ್ವಾನಿಸಿದೆ.
ಉದ್ಯಾವರ ಶ್ರೀ ಮಾಡ ದೈವ ಕ್ಷೇತ್ರದ ದೈವ ಪಾತ್ರಿಗಳು ಉದ್ಯಾವರ ಸಾವಿರ ಜಮಾತ್ ಮಸೀದಿಗೆ ಭೇಟಿ ನೀಡಿದ ವೇಳೆ ಮಸೀದಿಯ ಆಡಳಿತ ಸಮಿತಿಯ ಪ್ರತಿನಿಧಿಗಳು, ಹಾಗೂ ಮುಸ್ಲಿಂ ಬಾಂಧವರು ದೈವ ಪಾತ್ರಿಗಳಿಗೆ ಪೂರ್ವ ಪರಂಪರೆಯಂತೆ ವೈಭವದ ಸ್ವಾಗತ ನೀಡಿದ್ದಾರೆ.
ವಿಶೇಷವೆಂದರೆ ಉದ್ಯಾವರ ಮಾಡದ ಶ್ರೀ ಅರಸು ದೈವದ ಜಾತ್ರೆಯಲ್ಲಿ ಮುಸ್ಲಿಂ ಬಾಂಧವರೂ ಕೂಡ ಪಾಲ್ಗೊಳ್ಳುತ್ತಾರೆ. ಈ ಕ್ಷೇತ್ರದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಪರಂಪರೆಯಂತೆ ನೇಮೋತ್ಸವ ನಡೆಯುವ ದಿನದಂದು ಮಸೀದಿಯ ಅಧಿಕೃತರು ಕೂರಲು ದೈವಸ್ಥಾನದಲ್ಲಿ ವಿಶೇಷವಾದ ಸ್ಥಳವನ್ನು ಕೊಟ್ಟು, ಗೌರವದಿಂದ ಕಾಣುತ್ತಾರೆ. ಜಾತ್ರೆಯ ದಿನ ದೈವಗಳು ಆಶೀರ್ವದಿಸಿ ನೀಡಿದ ಹೂವನ್ನು ಜಮಾತಿನವರಿಗೆ ನೀಡಲಾಗುತ್ತದೆ.
ಮೇ 9ರಿಂದ 15ರ ತನಕ ಕ್ಷೇತ್ರದ ಜಾತ್ರೆ ನಡೆಯಲಿದ್ದು, ಮಾಡ ಕ್ಷೇತ್ರದ ಉತ್ಸವಕ್ಕೆ ಸಾವಿರ ಜಮಾತ್ ವ್ಯಾಪ್ತಿಯಲ್ಲಿರುವ ಹೆಚ್ಚಿನ ಮುಸ್ಲಿಂ ಬಾಂಧವರೂ ಪಾಲ್ಗೊಳ್ಳುತ್ತಾರೆ.