ಮಂಗಳೂರು, ಏ 20(Daijiworld News/MSP): ನಗರದ ಕಾವೂರಿನ ದೇರೆಬೈಲ್ ಬೊರುಗುಡ್ಡೆಯಲ್ಲಿ ಕುಡಿದ ಮತ್ತಿನಲ್ಲಿ ಗಂಡ, ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಏ.20 ಶನಿವಾರ ಬೆಳಗ್ಗಿನ ಜಾವ ಸುಮಾರು ಮೂರು ಗಂಟೆಗೆ ನಡೆದಿದೆ. ಹತ್ಯೆಯ ಬಳಿಕ ಆರೋಪಿ ಕಾವೂರು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಹತ್ಯೆಯಾದವರನ್ನು ಮಂಜುಳಾ ಎಂದು ಗುರುತಿಸಲಾಗಿದೆ. ಹೆಂಡತಿಯನ್ನು ಅನುಮಾನದಿಂದಲೇ ನೋಡುತ್ತಿದ್ದ ಗಂಡ ಶರಣಪ್ಪ ತಡರಾತ್ರಿ ಮಂಚದಲ್ಲಿ ಮಲಗಿದ್ದ ಪತ್ನಿ ಮಂಜುಳಾ ಎದೆಗೆ ಹಾಗೂ ಹೊಟ್ಟೆಗೆ ಚೂರಿಯಿಂದ ಚುಚ್ಚಿ ಕೊಲೆ ಮಾಡಿದ್ದಾರೆ.
ಘಟನೆಯ ವಿವರ:
ಶರಣಪ್ಪ ಮನೆಯಲ್ಲಿ ಗಲಾಟೆ ಕೇಳಿ ತಡ ರಾತ್ರಿ ಸ್ಥಳೀಯ ವ್ಯಕ್ತಿಯೊಬ್ಬರು ಎಚ್ಚರಗೊಂಡು ಮನೆಯ ಕಿಟಕಿ ಮೂಲಕ ನೋಡಿದಾಗ ಆರೋಪಿ ಶರಣಪ್ಪ ಪತ್ನಿಯ ಮೇಲೆ ಎರಗಿ ನೀನು ಸಾಯಲೇಬೇಕು ಎಂದು ಕಿರುಚುತ್ತಾ ಚೂರಿಯಿಂದ ಪತ್ನಿ ಮಂಜುಳಾ ಅವರ ಎದೆ ಹೊಟ್ಟೆಗೆ ಇರಿಯುತ್ತಿರುವುದು ಕಂಡು, ಸ್ಥಳೀಯ ದೂರುದಾರ ವ್ಯಕ್ತಿ ಗಾಬರಿಯಿಂದ ಶರಣಪ್ಪ ಎಂದು ಕೂಗಿದಾಗ ಆರೋಪಿ ಮಂಚದ ಮೇಲೆ ಚೂರಿ ಎಸೆದು ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಮಂಜುಳ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ಸ್ಥಳೀಯ ವ್ಯಕ್ತಿ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ದಂಪತಿಗೆ 4ಜನ ಹೆಣ್ಣು ಮಕ್ಕಳಿದ್ದು, ಮೂವರು ಮಕ್ಕಳು ರಜೆಯ ಹಿನ್ನಲೆಯಲ್ಲಿ ಉಡುಪಿ ಸಂಬಂಧಿಗಳ ಮನೆಗೆ ತೆರಳಿದ್ದರು. ಮತ್ತೊಬ್ಬ ಮಗಳನ್ನು ಶರಣಪ್ಪ ಶುಕ್ರವಾರವಷ್ಟೇ ಕಟೀಲಿನಲ್ಲಿರುವ ಸಂಬಂಧಿಕರ ಮನೆಗೆ ಬಿಟ್ಟು ಬಂದಿದ್ದ. ಹೀಗಾಗಿ ಶರಣಪ್ಪ ಪತ್ನಿಯನ್ನು ಹತ್ಯೆ ಮಾಡಲು ಸಂಚುರೂಪಿಸಿದ್ದನೇ ಎನ್ನುವ ಅನುಮಾನ ವ್ಯಕ್ತವಾಗಿದೆ. ಪತ್ನಿ ಮಂಜುಳಾ ಕೂಲಿಕಾರ್ಮಿಕೆಯಾಗಿದ್ದು, ಶರಣಪ್ಪ ಎಲ್ಲೂ ಕೆಲಸಕ್ಕೆ ಹೋಗದೆ ಮನೆಯಲ್ಲಿರುತ್ತಿದ್ದ. ಹೆಂಡತಿ ನಡವಳಿಕೆ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದ.
ಪತ್ನಿಯ ಕೊಲೆ ಮಾಡಿದ ಶರಣಪ್ಪ ಬಳಿಕ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.ಕಾವೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಗೆ ರವಾನಿಸಿದ್ದಾರೆ.