ಬಂಟ್ವಾಳ, ಡಿ 26 (DaijiworldNews/ AK): ತುಂಬೆ ವೆಂಟೆಡ್ ಡ್ಯಾಮ್ ನೀರಿನಿಂದ ಕೃಷಿ ಭೂಮಿ ನದಿಪಾಲು ಹಿನ್ನೆಲೆಯಲ್ಲಿ ಡ್ಯಾಂಗೆ ಮುತ್ತಿಗೆ ಹಾಕಿದ ರೈತರು ಕಚೇರಿಗೆ ಬೀಗ ಹಾಕಲು ಮುಂದಾದರು. ಪ್ರತಿಭಟನೆ ವೇಳೆ ಇಲಾಖೆ ಹಾಗೂ ರೈತರ ನಡುವೆ ಮಾತಿನ ಚಕಮಕಿ ಹಾಗೂ ತಲ್ಲಾಟ ಕೂಡ ನಡೆಯಿತು.
ಡ್ಯಾಂನ ಗೇಟ್ ಗೆ ಬೀಗ ಹಾಕಿ ಗೇಟ್ ಬಳಿಯೇ ರೈತರನ್ನು ಪೊಲೀಸರು ತಡೆದ ಸಂದರ್ಭದಲ್ಲಿ ಪೋಲೀಸ್ ಹಾಗೂ ರೈತರ ನಡುವೆ ತಲ್ಲಾಟ ನಡೆಯಿತು.
ಡ್ಯಾಂ ಗೇಟ್ ಬಳಿಯಲ್ಲಿ ರೈತರನ್ನು ತಡೆದಿದ್ದಕ್ಕೆ ಪೊಲೀಸರ ವಿರುದ್ದ ಆಕ್ರೋಶವ್ಯಕ್ತಪಡಿಸಿದರು.
ಪೊಲೀಸರು ಮತ್ತು ಡ್ಯಾಂ ಸಿಬ್ಬಂದಿ ಜೊತೆ ರೈತರ ವಾಗ್ವಾದ ಕೂಡ ಈ ಸಂದರ್ಭದಲ್ಲಿ ನಡೆಯಿತು.ಮಂಗಳೂರು ಪಾಲಿಕೆ ಕಮಿಷನರ್ ಹಾಗೂ ಜಿಲ್ಲಾಧಿಕಾರಿ ವಿರುದ್ದ ಆಕ್ರೋಶ ವನ್ನು ಈ ಸಂದರ್ಭದಲ್ಲಿ ರೈತರು ವ್ಯಕ್ತಪಡಿಸಿದರು.ಗೇಟ್ ಎದುರೇ ಕುಳಿತು ಪಾಲಿಕೆ ವಿರುದ್ದ ದಿಕ್ಕಾರ ಕೂಗಿದರು.
ನದಿ ಕೊರೆತದಿಂದ ನಾಶವಾದ ಕೃಷಿ ಭೂಮಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಅನೇಕ ಬಾರಿ ಅಧಿಕಾರಿಗಳಿಗೆ ಲಿಖಿತವಾದ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಕಿಡಿಕಾರಿದರು.
ಹಾಗಾಗಿ ಇನ್ನು ಮುಂದಿನ ದಿನಗಳಲ್ಲಿ ಡ್ಯಾಂ ನಿಂದ ಮುಳುಗಡೆಯಾದ ಹಾಗೂ ನೀರಿನಿಂದ ಕೊಚ್ಚಿಹೋದ ಕೃಷಿ ಜಮೀನಿಗೆ ಪರಿಹಾರ ಹಾಗೂ ತಡೆಗೋಡೆ ನಿರ್ಮಾಣಕ್ಕೆ ಅಗ್ರಹಿಸಿ ರೈತ ಸಂಘದಿಂದ ಮುತ್ತಿಗೆ ಹಾಕಿದರು.
ರೈತರು ಮುತ್ತಿಗೆ ಹಾಕುತ್ತಾರೆ ಎಂಬ ಮಾಹಿತಿ ಮೇರೆಗೆಡ್ಯಾಮ್ ಸುತ್ತಮುತ್ತ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತ್ರತ್ವದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಯಿತು..ಹೆಚ್ಚುವರಿಯಾಗಿ ಕೆ.ಎಸ್.ಆರ್.ಪಿ ತುಕಡಿಯನ್ನು ಸ್ಥಳದಲ್ಲಿ ನಿಯೋಜನೆ ಮಾಡಿದ್ದರು.ಪ್ರತಿಭಟನಕಾರರು ಆಗಮಿಸುವ ಮುನ್ನವೇ ಡ್ಯಾಮ್ ಗೆ ಬೀಗ ಹಾಕಿದ್ದ ಮಹಾನಗರ ಪಾಲಿಕೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿತ್ತು.ಎಕರೆ ಗಟ್ಟಲೆ ಕೃಷಿ ಭೂಮಿನಾಶ ಇಡೀ ಮಂಗಳೂರಿಗೆ ನೀರು ಪೂರೈಕೆ ಮಾಡುವ ತುಂಬೆಡ್ಯಾಮ್ ನಿಂದ ಹೊರ ಹುಮ್ಮುವ ನೀರಿನಿಂದ ನದಿಯ ಎರಡು ಭಾಗದಲ್ಲಿ ಎಕರೆಗಟ್ಟೆಲೆ ಕೊರೆತ ಉಂಟಾಗಿ, ಕೃಷಿ ಭೂಮಿ ನೀರು ಪಾಲು ಆಗಿದೆ.
ಇದೀಗ ಇದೆ ಡ್ಯಾಮ್ ನಿಂದ ಹೊರ ಬರುವ ನೀರಿನ ರಭಸದಿಂದಾಗಿ ಕೃಷಿಕರು ಕಂಗಾಲು ಅಗಿದ್ದಾರೆ .ಡ್ಯಾಮ್ ಸುತ್ತಮುತ್ತ ಸಮರ್ಪಕ ತಡೆಗೋಡೆ ನಿರ್ಮಿಸದೇ ನಿರ್ಲಕ್ಷ್ಯಮಾಡಿರುವುದೇ ಇದಕ್ಕೆ ಕಾರಣವಾಗಿದೆ.ವರ್ಷದಿಂದ ವರ್ಷಕ್ಕೆ ನೇತ್ರಾವತಿ ನದಿ ಕೊರೆತ ಉಲ್ಬಣವಾಗಿದ್ದು,ಡ್ಯಾಮ್ ನಿಂದ ನೀರು ಹೊರ ಬರುವ ರಭಸಕ್ಕೆ ಕೃಷಿ ಭೂಮಿ ನದಿ ಪಾಲು ಆಗಿದೆ .
ಅಡಿಕೆ, ತೆಂಗು, ಬಾಳೆಗಿಡ, ಕಾಳು ಮೆಣಸು ಮುಂತಾದ ಬೆಳೆಗಳು ನಾಶವಾಗಿದೆ.ಕೃಷಿಯನ್ನೇ ನಂಬಿಕೊಂಡ ಸುಮಾರು 9 ಕ್ಕೂ ಅಧಿಕ ಕುಟುಂಬಗಳು ಕಂಗಾಲು ಆಗಿದ್ದಾರೆ.ಹಲವು ವರ್ಷದ ಬೇಡಿಕೆಗೆ ಸಿಗದ ಸ್ಪಂದನೆ ಹಿನ್ನೆಲೆ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಶ್ರೀಧರ್ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ, ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಪ್ರಮುಖರಾದ ಇದಿನಬ್ಬ ನಂದಾವರ,ಸುದೇಶ್ ಮಯ್ಯ ಬಂಟ್ವಾಳ ತಹಶಿಲ್ದಾರ್ ಬಿ.ಎಸ್.ಕೂಡಲಗಿ, ಮಂಗಳೂರು ಮಹಾನಗರ ಪಾಲಿಕೆ ಕಾರ್ಯ ಪಾಲಕ ಇಂಜಿನಿಯರ್ ನರೇಶ್ ಶೆಣೈ ಬಂಟ್ವಾಳ ಉಪತಹಶೀಲ್ದಾರ್ ದಿವಾಕರ ಮುಗುಳಿಯ, ಕಂದಾಯ ನಿರೀಕ್ಷಕ ವಿಜಯ ಆರ್ ಮತ್ತಿತರರು ಉಪಸ್ಥಿತರಿದ್ದರು.