ಮಂಗಳೂರು, ಡಿ 26 (DaijiworldNews/AA): ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಇದೀಗ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ತಲುಪಿದೆ. ರೈಲು ಸೋಮವಾರ ಸಂಜೆ ಮಂಗಳೂರಿಗೆ ಆಗಮಿಸಿದ್ದು, ಇಂದಿನಿಂದ ಪ್ರಯೋಗಿಕ ಸಂಚಾರ ಆರಂಭಿಸಲಿದೆ.
ಇಂದು ಬೆಳಗ್ಗೆ 8:30ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ಈ ರೈಲು ಮಧ್ಯಾಹ್ನ 1:15ರ ವೇಳೆಗೆ ಮಡಗಾಂವ್ ತಲುಪಲಿದೆ. ಪುನಃ ಇಂದು ಮಧ್ಯಾಹ್ನ 1:45ಕ್ಕೆ ಮಡಗಾಂವ್ ನಿಂದ ಹೊರಟು ಸಂಜೆ 6:30ರ ವೇಳೆಗೆ ಮಂಗಳೂರು ತಲುಪಲಿದೆ. ಈ ನೂತನ ರೈಲು ಚೆನ್ನೈಯಿಂದ ಹೊರಟು ಮಂಗಳೂರನ್ನು ತಲುಪಿದೆ.
ದಕ್ಷಿಣ ರೈಲ್ವೆಯು ಮಂಗಳೂರು ಸೆಂಟ್ರಲ್ - ಮಡಗಾಂವ್ ಸೆಮಿ ಹೈ ಸ್ಪೀಡ್ ವಂದೇ ಭಾರತ್ ಎಕ್ಸ್ಪ್ರೆಸ್ ಡಿ. 30ರಂದು ಪ್ರಾರಂಭಿಸಲು ಸಜ್ಜಾಗಿದೆ. ಈ ಬಗ್ಗೆ ರೈಲ್ವೆ ಮಂಡಳಿ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಇನ್ನು ಮಂಗಳೂರು - ಮಡಗಾಂವ್ ಸಹಿತ 6 ವಂದೇಭಾರತ್ ಎಕ್ಸ್ಪ್ರೆಸ್ ರೈಲುಗಳು ಮತ್ತು ಮಂಗಳೂರು ಸೆಂಟ್ರಲ್ ನಿಲ್ದಾಣದ ಹೆಚ್ಚುವರಿ ಪ್ಲಾಟ್ ಫಾರಂ ಗಳನ್ನು ಪ್ರಧಾನಿ ಮೋದಿ ಉದ್ಘಾಟನೆ ಮಾಡುವ ಸಾಧ್ಯತೆಗಳಿವೆ ಎಂದು ರೈಲ್ವೆ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.