ಉಡುಪಿ, ಡಿ 25(daijiworldNews/MS): ರಾಜ್ಯದ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ಇರುವ ನಿರ್ಬಂಧವನ್ನು ವಾಪಸ್ ಪಡೆಯುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ನೀಡಿರುವ ಹೇಳಿಕೆ ಅತ್ಯಂತ ಸ್ವಾಗತಾರ್ಹ. ಇದೊಂದು ಅತ್ಯಂತ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಸಾವಿರಾರು ಮುಸ್ಲಿಮ್ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಕಂಟಕವಾಗಿದ್ದ ಈ ಹಿಂದಿನ ಬಿಜೆಪಿ ಸರ್ಕಾರದ ತೀವ್ರ ಜನ ವಿರೋಧಿ ನಿರ್ಧಾರವನ್ನು ವಾಪಸ್ ಪಡೆಯುತ್ತೇವೆ ಎಂದು ಸಿದ್ದರಾಮಯ್ಯ ನವರು ಹೇಳಿರುವುದು ಅವರ ಜನಪರ ನಿಲುವಿನ ದ್ಯೋತಕವಾಗಿದೆ. ಇದು ಯಾವುದೇ ಜನಪರ ಸರಕಾರ ತೆಗೆದುಕೊಳ್ಳಲೇ ಬೇಕಾದ ನಿರ್ಧಾರವಾಗಿತ್ತು. ಸಿದ್ದರಾಮಯ್ಯ ನವರು ಆದಷ್ಟು ಬೇಗ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಯಾಸೀನ್ ಮಲ್ಪೆ ಹೇಳಿದ್ದಾರೆ.
ಈ ಹಿಂದಿನ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರಕಾರ ದ್ವೇಷ, ಅಸಹನೆ, ಅಸಹಿಷ್ಣುತೆಯನ್ನೇ ತನ್ನ ಆಡಳಿತ ಮಂತ್ರವಾಗಿ ಸ್ವೀಕರಿಸಿದ ಪರಿಣಾಮವಾಗಿ ಸಾವಿರಾರು ಅಮಾಯಕ ಮುಸ್ಲಿಮ್ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು. ಜನ ವಿರೋಧಿ ನೀತಿಗಳನ್ನು ಅನುಸರಿಸಿದ್ದಕ್ಕೆ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ. ನಿಮ್ಮ ದ್ವೇಷ, ಅಸಹಿಷ್ಣುತೆಯನ್ನು ಕರುನಾಡು ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಆದರೆ ಕೋಮು ದ್ವೇಷವನ್ನೇ ಉಸಿರಾಡುವ ಬಿಜೆಪಿ ಇನ್ನೂ ಪಾಠ ಕಲಿತಿಲ್ಲ. ಹಿಜಾಬ್ ಮೇಲಿನ ನಿರ್ಬಂಧ ವಾಪಸ್ ಪಡೆಯುವುದು ಇಡೀ ನಾಡು ಮುಕ್ತ ಕಂಠದಿಂದ ಶ್ಲಾಘಿಸಿ ಸ್ವಾಗತಿಸಬೇಕಾಗಿದೆ. ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ದ್ವೇಷ ರಾಜಕೀಯವನ್ನೇ ತಮ್ಮ ನೀತಿಯನ್ನಾಗಿ ಮಾಡಿಕೊಂಡಿರುವ ಬಿಜೆಪಿಯ ಒತ್ತಡ ತಂತ್ರಗಳಿಗೆ ಕಿಮ್ಮತ್ತು ನೀಡದೆ ಕೂಡಲೇ ಈ ಬಗ್ಗೆ ಆದೇಶ ಹೊರಡಿಸಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಆಗ್ರಹಿಸುತ್ತದೆ ಎಂದು ಯಾಸೀನ್ ಮಲ್ಪೆ ಅವರು ತಿಳಿಸಿದ್ದಾರೆ.