ಮಂಗಳೂರು, ಡಿ 25 (DaijiworldNews/MR): ಮಂಗಳೂರಿನ ಕೆಎಸ್ ರಾವ್ ರಸ್ತೆಯ ಬಳಿ ಬೈಕ್ ಸವಾರ ತನ್ನ ಬೈಕ್ ಸಮೇತ ಕೇಬಲ್ ಅಳವಡಿಸಲು ಅಗೆದಿದ್ದ ಹೊಂಡಕ್ಕೆ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಘಾತದಿಂದ ಪಾರಾಗಿದ್ದಾರೆ.
ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ ರಸ್ತೆಗಳು ಸ್ಮಾರ್ಟ್ ಆಗಿದ್ದರೂ ಕಾಂಕ್ರೀಟ್ ಅಗೆದು ಕೇಬಲ್ ಹಾಕುವ ಕೆಲಸದಲ್ಲಿ ನಿರತರಾಗಿದ್ದಾರೆ. ಮೆಸ್ಕಾಂ ಎಲ್ಲೆಂದರಲ್ಲಿ ಕೇಬಲ್ ಆಳವಡಿಸುವ ಕೆಲಸ ಮಾಡುತ್ತಿದ್ದು, ಕೆಲವು ರಸ್ತೆಗಳನ್ನು ಅಗೆದಿರುವ ಕಾರಣ ವಾಹನ ಸವಾರರಿಗೆ ರಕ್ಷಣೆ ಇಲ್ಲದಂತಾಗಿದೆ.
ಮಂಗಳೂರಿನ ಸಿಟಿ ಸೆಂಟರ್ ಬಳಿಯೇ ಈ ಗುಂಡಿ ಇದ್ದು, ಬೈಕ್ ಸವಾರ ಬೈಕ್ ಸಮೇತ ಅದರೊಳಗೆ ಬಿದ್ದಿದ್ದಾನೆ. ಕೆಲವು ಸಣ್ಣಪುಟ್ಟ ಗಾಯಗಳಾಗಿದ್ದು ಸವಾರ ಚಿಕಿತ್ಸೆ ಪಡೆದಿದ್ದಾರೆ. ಈ ಹೊಂಡಗಳು, ನಗರದ ಜನನಿಬಿಡ ರಸ್ತೆಗಳಲ್ಲಿ ಅಗೆಯಲಾಗಿದೆ. ಅದರಲ್ಲೂ ರಾತ್ರಿ ವೇಳೆ ವಾಹನ ಚಾಲನೆ ಮಾಡಿ ಗಮನ ಹರಿಸದೇ ಇದ್ದರೆ ಅಪಾಯ ಕಟ್ಟಿಟಬುತ್ತಿ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.