ಉಡುಪಿ, ಎ20(Daijiworld News/SS): ರಾಜ್ಯದಲ್ಲಿನ ಸಮ್ಮಿಶ್ರ ಸರಕಾರ ಅರ್ಹ ರೈತರ ಪಟ್ಟಿಯನ್ನೇ ಕೇಂದ್ರಕ್ಕೆ ಸಮರ್ಪಕವಾಗಿ ನೀಡದೇ ಕೃಷಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ರಾಜ್ಯ ಬಿಜೆಪಿ ನಾಯಕಿ, ಚಿತ್ರ ನಟಿ ತಾರಾ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಲವತ್ತಾರು ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡಿದ್ದೇವೆಂದು ಹೇಳುತ್ತಿದ್ದಾರೆ. ಆದರೆ ಎಷ್ಟು ಜನ ರೈತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಮನ್ನಾ ಮಾಡಿದ್ದೇವೆಂದು ಹೇಳುವವರು ರಾಜ್ಯದಲ್ಲಿ ನಡೆಯುವ ಎರಡನೇ ಹಂತದ ಚುನಾವಣೆಯ ಮುನ್ನಾವಾದರೂ ಶ್ವೇತಪತ್ರ ಹೊರಡಿಸಲಿ. ಆಗ ಜನರಿಗೆ ಸತ್ಯಾಸತ್ಯತೆ ತಿಳಿಯುತ್ತದೆ ಎಂದು ಹೇಳಿದ್ದಾರೆ.
ಕೃಷಿಕರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಕಿಸಾನ್ ಸಮ್ಮಾನ್ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ರಾಜ್ಯದಲ್ಲಿನ ಸಮ್ಮಿಶ್ರ ಸರಕಾರ ಅರ್ಹ ರೈತರ ಪಟ್ಟಿಯನ್ನೇ ಕೇಂದ್ರಕ್ಕೆ ಸಮರ್ಪಕವಾಗಿ ನೀಡದೇ ಕೃಷಿಕರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
2014ರಲ್ಲಿ ಕೇವಲ ಮೋದಿ ಹೆಸರಿನಲ್ಲಿ ಚುನಾವಣೆ ಎದುರಿತ್ತಿದ್ದೇವೆ. ಆದರೆ ಈಗ ಮೋದಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ದೇಶದ ಭದ್ರತೆಗಾಗಿ ಅವರಿಟ್ಟ ದಿಟ್ಟಹೆಜ್ಜೆಯನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಈಗ ಮೋದಿ ಅವರು ಕೇವಲ ವ್ಯಕ್ತಿಯಾಗಿರದೇ ದೇಶದ ಬಹುದೊಡ್ಡ ಶಕ್ತಿಯಾಗಿದ್ದಾರೆ ಎಂದು ಹೇಳಿದರು.
ಸಮಾಜದ ಎಲ್ಲಾ ವರ್ಗದವರೂ ಬಿಜೆಪಿಯ ಬಗೆಗೆ ಒಲವು ಹೊಂದಿದ್ದಾರೆ. ಯುಪಿಎ ಸರಕಾರದ ಅವಧಿಯಲ್ಲಿ ಬೆಲೆ ಏರಿಕೆ ದೇಶದ ಜನರ ಸಮಸ್ಯೆಯಾಗಿತ್ತು. ಆದರೆ ಈಗ ಅದು ಚರ್ಚೆಗೆ ಬಂದಿಲ್ಲ. ಕೇಂದ್ರ ಸರಕಾರ ಮೀನುಗಾರರ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸುತ್ತಿರುವುದು ಮೀನುಗಾರರ ಬಗೆಗಿರುವ ಬದ್ಧತೆಯನ್ನು ತೋರಿಸುತ್ತದೆ ಎಂದು ತಿಳಿಸಿದರು.