ಬಂಟ್ವಾಳ, ಡಿ 24(DaijiworldNews/SK): ಆ್ಯಪ್ ಒಂದರಲ್ಲಿ ಹಣ ಡಬ್ಬಲ್ ಆಗುತ್ತದೆ ಎಂದು ನಂಬಿ 21 ಲಕ್ಷ ರೂ. ಹೂಡಿಕೆ ಮಾಡಿ ಹಣ ಕಳೆದುಕೊಂಡ ಮಹಿಳೆಯೊಬ್ಬರು ಸಂಗಬೆಟ್ಟು ಸಮೀಪದ ಪುಚ್ಚಮೊಗರು ಎಂಬಲ್ಲಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ವರದಿಯಾಗಿದೆ.
ಮೃತರನ್ನು ಕುಕ್ಕಿಪಾಡಿ ಗ್ರಾಮದ ವೀಟಾ ಮರಿನಾ ಡಿಸೋಜ (32) ಎಂದು ಗುರುತಿಸಲಾಗಿದೆ.
ಈ ಹಿಂದೆ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ವೀಟಾ ಮರಿನಾ ಅವರು ಹುದ್ದೆ ತೊರೆದು ವಿಮಾ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದರು. ಈ ನಡುವೆ ಯಾವುದೋ ಮೊಬೈಲ್ ಆ್ಯಪ್ ನಂಬಿ ಸುಮಾರು 21 ಲಕ್ಷಕ್ಕೂ ಅಧಿಕ ಹಣ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದರು. ಈ ಬಗ್ಗೆ ಅವರು ಪೊಲೀಸರಿಗೂ ದೂರು ನೀಡಿದ್ದರು.
ಈ ನಡುವೆ ವೀಟಾ ಅವರು ಶನಿವಾರ ರಾತ್ರಿ 9 ಗಂಟೆಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿ ನಾಪತ್ತೆಯಾಗಿದ್ದರು. ವಿಷಯ ತಿಳಿದ ಮನೆಯವರು ಹುಡುಕಾಟ ನಡೆಸಿದಾಗ ಫಲ್ಗುಣಿ ಸೇತುವೆಯಲ್ಲಿ ಇವರ ದ್ವಿಚಕ್ರ ವಾಹನ ಪತ್ತೆಯಾಗಿದ್ದು, ಬಳಿಕ ಅಗ್ನಿಶಾಮಕದಳದ ಸಿಬ್ಬಂದಿಗಳು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.
ಇನ್ನು ಬಹುಗ್ರಾಮ ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಿರುವ ಅಣೆಕಟ್ಟೆ ಬಳಿ ಯುವತಿಯ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ. ಬಳಿಕ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರ ತಂಡ ಸ್ಥಳಕ್ಕೇ ಭೇಟಿ ನೀಡಿ, ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.