ಉಡುಪಿ, ಡಿ24(daijiworldNews/AK): ಕೈಗಾರಿಕೆಗಾಗಿ ಕೆಐಎಡಿಬಿ ಮೂಲಕ ಭೂಸ್ವಾಧೀನಗೊಳಿಸಿ ಪಡೆದು ನಷ್ಟ ಅನುಭವಿಸಿದ ಬಳಿಕ ಜಾಗವನ್ನು ಅಧಿಕ ದರಕ್ಕೆ ಇತರ ಖಾಸಗಿ ಕಂಪನಿಗಳಿಗೆ ನೀಡುತ್ತಿರುವ ಬದಲು ಸರಕಾರ ವಶಪಡಿಸಿಕೊಂಡು ಕಾಪು ತಾಲೂಕಿನ 15 ಸಾವಿರಕ್ಕೂ ಅಧಿಕ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ನೀಡಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆಗ್ರಹಿಸಿದ್ದಾರೆ.
ಶನಿವಾರ ಪಡುಬಿದ್ರಿ-ಕಾರ್ಕಳ ರಸ್ತೆಯ ನಂದಿಕೂರು ಬಳಿ ಕಾರ್ಯಾಚರಿಸುತ್ತಿರುವ ಸುಜ್ಞಾನ್ (ಆಸ್ಪಿನ್) ಘಟಕದ ಮುಂಭಾಗ ವಿವಿಧ ಸಂಘ ಸಂಸ್ಥೆಗಳ ಜತೆಗೂಡಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ಭೂ ಅವ್ಯವಹಾರದ ವಿರುದ್ಧ ಸಾರ್ವಜನಿಕ ಬೃಹತ್ ಪ್ರತಿಭಟನೆ-ಜನಾಂದೋಲನ ಸಭೆಯಲ್ಲಿ ಅವರು ಮಾತನಾಡಿದರು.
ಕೈಗಾರಿಕಾ ಅಭಿವೃದ್ಧಿಗಾಗಿ ಕೆಐಎಡಿಬಿ ಮೂಲಕ ಸುಜ್ಞಾನ್ ಎನರ್ಜಿ ಇಂಡಿಯಾ ಕಂಪನಿ 1200 ಎಕರೆ ಜಾಗ ಅತೀ ಕಡಿಮೆ ದರಕ್ಕೆ ಪಡೆದಿತ್ತು. ಬಳಿಕ ಕಂಪನಿ ನಷ್ಟ ಅನು ಭವಿಸಿದ ಬಳಿಕ ಆ ಜಾಗವನ್ನು ಅಧಿಕ ದರಕ್ಕೆ ಕೆಲವೇ ಕೆಲವು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.
ಹೆಜಮಾಡಿ ಟೋಲ್ನಲ್ಲಿ ಪಡುಬಿದ್ರಿ ಜಿಪಂ ವ್ಯಾಪ್ತಿಯ ಎಲ್ಲ ವಾಹನಗಳಿಗೆ ಶುಲ್ಕ ವಿನಾಯಿತಿ ಹಾಗೂ ಪಡುಬಿದ್ರಿ ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಕೇಂದ್ರ ಹುನ್ನಾರವನ್ನು ಕೈ ಬಿಡಬೇಕು ಎಂದು ಅವರು ಒತ್ತಾಯಿಸಿದರು. ನಮ್ಮ ಬೇಡಿಕೆಗಳನ್ನು ಶೀಘ್ರ ಈಡೇರಿಸದಿದ್ದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದವರು ಎಚ್ಚರಿಸಿದರು.
ವಿವಿಧ ಬೇಡಿಕೆಗಳ ಬಗ್ಗೆ ಜಿಲ್ಲಾಡಳಿತ, ಮುಖ್ಯಮಂತ್ರಿಗಳು, ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಕಾಪು ತಹಸೀಲ್ದಾರ್ ಪ್ರತಿಭಾ ಮೂಲಕ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ಪ್ರಮುಖರಾದ ಐವನ್ ಡಿಸೋಜಾ, ಪ್ರಸಾದ್ ರಾಜ್ ಕಾಂಚನ್, ಉದಯಕುಮಾರ್ ಶೆಟ್ಟಿ ಮುನಿಯಾಲು, ಡಾ. ಅಂಶುವಂತ ಚಿಕ್ಕಮಗಳೂರು, ಪ್ರತಿಭಾ ಕುಳಾಯಿ, ಎಂ.ಎ.ಗಫೂರ್, ಸುಧೀರ್ ಕುಮಾರ್ ಮರೋಳಿ ಮತ್ತಿತರರು ಮಾತನಾಡಿ, ಬೇಡಿಕೆ ಈಡೇರುವ ತನಕದ ಹೋರಾಟಕ್ಕೆ ಬೆಂಬಲ ಘೋಷಿಸಿದರು.
ಕಾಂಗ್ರೆಸ್ ಪ್ರಮುಖರಾದ ನವೀನಚಂದ್ರ ಸುವರ್ಣ, ಸಂತೋಷ್ ಕುಲಾಲ್, ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ರಮೇಶ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಳೆಬೈಲು, ಮಲ್ಯಾಡಿ ಶಿವರಾಮ ಶೆಟ್ಟಿ ಮಂಜುನಾಥ ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ವೆರೋನಿಕಾ ಕರ್ನೆಲಿಯೋ, ದೀಪಕ್ ಕೋಟ್ಯಾನ್, ದಿವಾಕರ ಶೆಟ್ಟಿ ಕಾಪು, ವಿಶ್ವಾಸ್ ವಿ.ಅಮೀನ್, ವೈ.ಸುಧೀರ್ ಕುಮಾರ್, ಶಾಂತಲತಾ ಶೆಟ್ಟಿ ಶರ್ಪುದ್ದೀನ್ ಶೇಖ್, ರಮೀಜ್ ಹುಸೇನ್, ಮೊಹಮ್ಮದ್ ಸಾಧಿಕ್, ಸುಧೀರ್ ಕರ್ಕೇರ, ಜಿತೇಂದ್ರ ಪುರ್ಟಾಡೊ, ಡೇವಿಡ್ ಡಿಸೋಜ, ಅಶ್ವಿನಿ, ಶಶಿಧರ ಶೆಟ್ಟಿ ಎಲ್ಲೂರು, ವೈ.ಸುಕುಮಾರ್, ಎಂ.ಪಿ. ಮೊಯ್ಲಿನಬ್ಬ, ರಾಜೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.