ಬ್ರಹ್ಮಾವರ,ಡಿ 23(daijiworldNews/RA):ಕರ್ತವ್ಯಕ್ಕೆ ಅಡ್ಡಿಪಡಿಸಿ ವೈದ್ಯರಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯ ವಿವರ:
ದೂರುದಾರರಾದ ಡಾ. ರಾಕೇಶ್(52) ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಡಿ.21ರ ಸಂಜೆ ಸಂಜೆ ವೇಳೆ ಈ ಘಟನೆ ನಡೆದಿದೆ.ಬಹ್ಮಾವರದಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ದ್ವಿಚಕ್ರ ವಾಹನ ಅಪಘಾತಗೊಂಡ ಕಾರಣ ಹೇಳಿ ಇಬ್ಬರು ಯುವಕರು ತುರ್ತು ಚಿಕಿತ್ಸಾ ವಿಭಾಗಕ್ಕೆ ಬಂದಿದ್ದಾರೆ.
ಈ ವೇಳೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಕೇಶ್ ಎಂಬವರು ರೋಗಿಯನ್ನು ತಪಾಸಣೆ ಮಾಡುವಾಗ ತಪಾಸಣೆಯನ್ನು ನಿರಾಕರಿಸಿ ಹೊರ ಹೋಗಿದ್ದರು ಎನ್ನಲಾಗಿದೆ.
ನಂತರ ಮತ್ತೆ ವಾಪಾಸು ಬಂದು ಚಿಕಿತ್ಸೆ ನೀಡುವಂತೆ ತಿಳಿಸಿದ ಮೇರೆಗೆ ಡಾ.ರಾಕೇಶ್ ಚಿಕಿತ್ಸೆ ನೀಡಲು ಮುಂದಾದರು.
ಆದ್ರೆ ಈ ವೇಳೆ ಗಾಯಾಳುವಿನ ಜೊತೆಯಲ್ಲಿದ್ದ ಆರೋಪಿ ತುರ್ತು ಚಿಕಿತ್ಸಾ ವಿಭಾಗದ ಬಾಗಿಲನ್ನು ಒತ್ತಾಯದಿಂದ ದೂಡಿ ಕರ್ತವ್ಯದಲ್ಲಿದ್ದ ವೈದ್ಯರಿಗೆ ಚಿಕಿತ್ಸೆ ನೀಡುವಲ್ಲಿ ಅಡ್ಡಿಪಡಿಸಿ ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಲು ಪ್ರಯತ್ನಿಸಿದ್ದಾನೆ.
ಜೊತೆಗೆ ವೈದ್ಯರ ಮುಖಕ್ಕೆ ಮತ್ತು ಕುತ್ತಿಗೆಗೆ ಹೊಡೆದು, ಚಿಕಿತ್ಸೆ ನೀಡದಂತೆ ತಡೆದು ಅಡ್ಡಿಪಡಿಸಿದ್ದಾನೆ.
ಬಳಿಕ ಗಾಯಾಳು ಕೂಡ ವೈದ್ಯರ ಅನುಮತಿ ಇಲ್ಲದೆ ಆಸ್ಪತ್ರೆಯಿಂದ ನಿರ್ಗಮಿಸಿದ್ದಾನೆ.
ಆರೋಪಿಯು ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆಯೊಡ್ಡಿ ಆಸ್ಪತ್ರೆಯ ಹೊರಗಡೆ ಪಾರ್ಕ್ ಮಾಡಿದ ಬೈಕಿನಲ್ಲಿ ಹೋಗಿದ್ದಾನೆ ಎಂದು ದೂರಲಾಗಿದೆ.