ಮೂಡುಬಿದಿರೆ, ಡಿ 23 (DaijiworldNews/MS): ಜನವರಿಯಿಂದ ಪ್ರತೀ ತಾಲೂಕಿನಲ್ಲಿಯೂ ಜನಸಸ್ಪಂದನ ಕಾರ್ಯಕ್ರಮ ನಡೆಸಿ, ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲಾಗುವುದು ಎಂದು ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಅವರು ಶುಕ್ರವಾರ ಮೂಡಬಿದಿರೆ ಮಿನಿ ವಿಧಾನಸೌಧದಲ್ಲಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನರ ಅರ್ಜಿಗಳಿಗೆ ಅಧಿಕಾರಿಗಳು ಸರಿಯಾದ ಸ್ಪಂದನೆ ನೀಡಬೇಕು. ಕಾಲ ಮಿತಿಯಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಸಚಿವರು ಹೇಳಿದರು.
ಕೆಡಿಪಿ ಸಭೆಯನ್ನು ನಿಗದಿತವಾಗಿ ನಡೆಸಿ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಬೇಕು. ರಾಜ್ಯ ಸರಕಾರವು ಜನತೆಗೆ ನೀಡಿದ ಆಶ್ವಾಸನೆಯ 4 ಗ್ಯಾರಂಟಿಗಳನ್ನು ಈಗಾಗಲೆ ಜನತೆಯ ಮುಂದಿಟ್ಟಿದೆ. ಕೊನೆಯ ಗ್ಯಾರಂಟಿ "ಯುವ ನಿಧಿ" ಯೋಜನೆಗೆ ಜನವರಿ 12 ರಂದು ಚಾಲನೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ರಾಜ್ಯ ಸರಕಾರದ ಯೋಜನೆಗಳು ಜನರಿಗೆ ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ತಲುಪುತ್ತಿವೆ. ಇದರಿಂದ ಜನತೆಯಲ್ಲಿ ನೆಮ್ಮದಿ ಮೂಡಿದೆ ಎಂದು ಸಚಿವರು ಹೇಳಿದರು.
ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಲು ಫಲಾನುಭವಿಗಳು ಇದುವರೆಗೆ ತಮ್ಮ ಪಾಲಿನ ವಂತಿಗೆಯಾಗಿ ರೂ. 4.50 ಲಕ್ಷ ಪಾವತಿಸಬೇಕಿತ್ತು. ಇದನ್ನು ರೂ. ಒಂದು ಲಕ್ಷಕ್ಕೆ ಇಳಿಸುವ ಕ್ರಾಂತಿಕಾರಿ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಂಡಿದೆ. ಇದರಿಂದ ಅರ್ಧದಲ್ಲಿಯೇ ನಿಂತಿದ್ದ ಮನೆ ನಿರ್ಮಾಣ ಕಾಮಗಾರಿಗಳು ಚುರುಕುಗೊಳ್ಳಲಿದೆ. ಹಂತ ಹಂತವಾಗಿ ವಸತಿ ಯೋಜನೆಗಳು ಸಂಪೂರ್ಣಗೊಳ್ಳಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಸಚಿವರು ಈ ಸಂದರ್ಭದಲ್ಲಿ ಹಕ್ಕುಪತ್ರ ಹಾಗೂ ಪಿಂಚಣಿ ಮಂಜೂರಾತಿಗಳನ್ನು ವಿತರಿಸಿದರು.
ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಉಪವಿಭಾಗಾಧಿಕಾರಿ ಹರ್ಷವರ್ಧನ್, ಮೂಡಬಿದ್ರೆ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಉಪಸ್ಥಿತರಿದ್ದರು.