ಪುತ್ತೂರು,ಡಿ 23 (daijiworldNews/RA):ಪುತ್ತೂರಿನ ತಾಲೂಕು ಸಾರ್ವಜನಿಕ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಹವಾನಿಯಂತ್ರಿತ ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಈ ಅವಘಡ ಸಂಭವಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ಈ ವೇಳೆ ತಕ್ಷಣ ತೀವ್ರ ನಿಗಾ ಘಟಕದಲ್ಲಿದ್ದ ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಯಿತು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.
ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಆಶಾ ಪುತ್ತೂರಾಯ ಅವರು ಹವಾನಿಯಂತ್ರಿತ ಘಟಕದ ಚಿಪ್ಪು ಒಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ, ಹವಾನಿಯಂತ್ರಿತ ಯಂತ್ರ ಸಹಿತ ಅದರ ಬಳಿ ಇದ್ದ ಕೆಲವು ಉಪಕರಣಕ್ಕೆ ಹಾನಿಯಾಗಿದೆ.
ತೀವ್ರ ನಿಗಾ ಘಟಕದಲ್ಲಿ ಇಬ್ಬರು ರೋಗಿಗಳಿದ್ದು, ಅವರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.ಮಾಹಿತಿ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ಶಾಸಕ ಅಶೋಕ್ ರೈಯವರು ಧಾವಿಸಿದ್ದಾರೆ.
ಪುತ್ತೂರಿನ ವಿಹಿಂಪ ಕಛೇರಿಯಲ್ಲಿ ತಂಗಿದ್ದ ದತ್ತ ಮಾಲಾಧಾರಿಗಳು, ಹಾಗೂ ಸ್ಥಳೀಯ ಯುವಕರು ಬೆಂಕಿ ನಂದಿಸಲು ಅಗ್ನಿ ಶಾಮಕ ದಳಕ್ಕೆ ನೆರವಾಗಿದ್ದಾರೆ ಎಂದು ತಿಳಿದು ಬಂದಿದೆ.
ತಡ ರಾತ್ರಿ 12:30 ರಿಂದ 1 ಗಂಟೆಯ ಸುಮಾರಿಗೆ ಘಟನೆ ನಡೆದಿದೆ.
ತಕ್ಷಣವೇ ಅಗ್ನಿಶಾಮಕ ದಳದವರು ಬೆಂಕಿ ನಂದಿಸಿ ದೊಡ್ಡ ಅನಾಹುತ ತಪ್ಪಿಸಿದರು.ಬೆಂಕಿ ಕಾಣಿಸಿಕೊಂಡ ತಕ್ಷಣವೇ ಅಸ್ಪತ್ರೆ ಅಡಳಿತ ಅಧಿಕಾರಿ ಡಾ.ಅಶಾ ಪುತ್ತೂರಾಯ ಮತ್ತು ಅಸ್ಪತ್ರೆ ಸಿಬಂದಿಗಳು ರೋಗಿಗಳನ್ನು ಬೆಂಕಿ ತಗುಲಿದ ಕೋಠಡಿಯಿಂದ ತೆರವುವಗೊಳಿಸಿದ್ದರು.