ಬಂಟ್ವಾಳ, ಡಿ 22 (daijiworldNews/AK): ಬಸ್ ನಲ್ಲಿ ಪ್ರಯಾಣಿಕನೋರ್ವನ ಪಿಕ್ ಪಾಕೆಟ್ ಮಾಡಿ ಪರಾರಿಯಾಗಲು ಯತ್ನಿಸಿದ ಕಾಸರಗೋಡು ಮೂಲದ ವ್ಯಕ್ತಿಯೋರ್ವನನ್ನು ಕರ್ತವ್ಯ ನಿರತ ಟ್ರಾಫಿಕ್ ಪೋಲೀಸ್ ಸಿಬ್ಬಂದಿ ಹಿಡಿದು ಪೋಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಇಂದು ಬಿಸಿರೋಡಿನಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆಯ ಉದುಮಾ ನಿವಾಸಿ ನಜೀರ್ ಎಂಬವನು ಪಿಕ್ ಪಾಕೆಟ್ ಮಾಡಿರುವ ವ್ಯಕ್ತಿ . ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಪುತ್ತೂರು ನಿವಾಸಿ ಕರುಣಾಕರ ಎಂಬವರು ಬಿಸಿರೋಡಿನಿಂದ ಪುತ್ತೂರಿಗೆ ತೆರಳುವುದಕ್ಕೆ ಬಿಸಿರೋಡಿನಲ್ಲಿ ಖಾಸಗಿ ಬಸ್ ಹತ್ತಿದ್ದರು.ಬಸ್ ತುಂಬಾ ಪ್ರಯಾಣಿಕರು ಇದ್ದ ಕಾರಣ ಇವರು ನಿಂತುಕೊಂಡಿದ್ದರು.
ಈ ಸಂದರ್ಭದಲ್ಲಿ ಬಸ್ಸ್ ನಲ್ಲಿದ್ದ ಕದೀಮ ನಜೀರ್ ಎಂಬಾತ ಬಸ್ ಬಿಸಿರೋಡಿನಿಂದ ಪಾಣೆಮಂಗಳೂರು ತಲುಪುತ್ತಿದ್ದಂತೆ ಕರುಣಾಕರ ಅವರ ಪ್ಯಾಂಟ್ ನ ಹಿಂಬದಿಯಲ್ಲಿ ಇರಿಸಿದ್ದ ಹಣದ ಪರ್ಸ್ ನ್ನು ಕಿತ್ತುಕೊಂಡು ಬಸ್ ನಿಂದ ಇಳಿದಿದ್ದಾನೆ.
ಈತ ಪರ್ಸ್ ಎಗರಿಸುವುದನ್ನು ಬಸ್ ನೊಳಗಿದ್ದ ಪ್ರಯಾಣಿಕನೋರ್ವ ನೋಡಿದ್ದು,ಕೂಡಲೇ ಕರುಣಾಕರ ಅವರಿಗೆ ತಿಳಿಸಿದ್ದಾನೆ.ಕಳ್ಳ ಬಸ್ ನಿಂದ ಇಳಿದು ಹೋಗುವುದನ್ನು ಗಮನಿಸಿ ಕರುಣಾಕರ ಕೂಡ ಇಳಿದಿದ್ದಾರೆ.
ಅದಾಗಲೇ ನಜೀರ್ ಕೆ.ಎಸ್.ಆರ್.ಟಿ.ಸಿ.ಬಸ್ ಹತ್ತಿ ಬಿಸಿರೋಡು ಕಡೆಗೆ ತೆರಳಿದ್ದಾನೆ.ಕರುಣಾಕರು ಖಾಸಗಿ ಬಸ್ ನಲ್ಲಿ ಬಿಸಿರೋಡಿನ ಕಡೆ ತೆರಳಿದ್ದಾರೆ.ಅದಾಗಲೇ ಇವರು ಸಂಬಂಧಿಕರೋರ್ವರ ಮೂಲಕ ಬಿಸಿರೋಡಿನ ಪಾಯಿಂಟ್ ನಲ್ಲಿದ್ದ ಪೋಲೀಸ್ ಸಿಬ್ಬಂದಿ ರಾಕೇಶ್ ಎಂಬವರಿಗೆ ನಡೆದ ವಿಚಾರ ತಿಳಿಸಿದ್ದ ಬಸ್ ನಲ್ಲಿ ಬಿಸಿರೋಡು ಕಡೆಗೆ ಬರುವುದನ್ನು ತಿಳಿಸಿದ್ದಾರೆ.
ನಜೀರ್ ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ಇಳಿದು ಕಾಸರಗೋಡು ಬಸ್ ಗಾಗಿ ತೆರಳುವ ವೇಳೆ ಟ್ರಾಫಿಕ್ ಪೋಲೀಸ್ ರಾಕೇಶ್ ಅವರ ಕೈ ಸಿಕ್ಕಿದ್ದಾನೆ.
ಈತನನ್ನು ನಗರ ಪೋಲೀಸ್ ಠಾಣೆಗೆ ಒಪ್ಪಿಸಿದ್ದು,ವಿಚಾರಣೆ ನಡೆಸುತ್ತಿದ್ದಾರೆ.
ಕರುಣಾಕರ ಅವರ ಪರ್ಸ್ ನಲ್ಲಿ ಸುಮಾರು 6 ಸಾವಿರ ಜೊತೆ ಅನೇಕ ಅಗತ್ಯ ದಾಖಲೆಗಳಿದ್ದು,ಎಲ್ಲವೂ ಇವರಿಗೆ ವಾಪಾಸು ಸಿಕ್ಕಿದೆ ಎಂದು ಅವರು ತಿಳಿಸಿದ್ದಾರೆ.