ಕಾರ್ಕಳ, ಡಿ 22( DaijiworldNews/AK): ಕನ್ನಡ ಮಾಧ್ಯಮ ಶಾಲೆ ಎಂಬ ಕೀಲಾರಿಮೆ ನಮ್ಮಲ್ಲಿ ಇರಬಾರದು, ಕಷ್ಟ ಪಟ್ಟು ಓದಿದಾದ ಪ್ರತಿಫಲ ಖಂಡಿತ ಸಿಗುತ್ತದೆ. ಕಲಿಕೆಗೆ ಮಾಧ್ಯಮ ಮುಖ್ಯವಲ್ಲ, ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳೇ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಇಜಿಡಿಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಮಂಗಳೂರು ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಫೆರ್ನಾಂಡೀಸ್ ಹೇಳಿದರು.
ಅವರು ನಂದಳಿಕೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬೋರ್ಡು ಶಾಲೆಯಲ್ಲಿ ಶುಕ್ರವಾರ ನಡೆದ ಇಜಿಡಿಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ವತಿಯಿಂದ ಸಿಎಸ್ಆರ್ ಅನುದಾನದಿಂದ ಕೊಡುವ ಕಂಪ್ಯೂಟರ್ ಕೊಡುಗೆ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹ್ಯೂಮನ್ ರಿಸೋರ್ಸ್ ಹೆಚ್.ಆರ್ ಹಾಗೂ ಪ್ರಬಂಧಕ ಜೀವನ್ ಡಿಸೋಜಾ ಮಾತನಾಡಿ, ಕಲಿಕೆಯ ಸಂದರ್ಭದಲ್ಲಿ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಕೊಳ್ಳಬೇಕು. ಆ ಮೂಲಕ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಆಂಗ್ಲ ಮಾದ್ಯಮ ಶಾಲೆಗಳಲ್ಲಿ ಮಾತ್ರ ಕಂಪ್ಯೂಟರ್ ಕಲಿಯಲ್ಲ ಕನ್ನಡ ಮಾದ್ಯಮದ ವಿದ್ಯಾರ್ಥಿಗಳು ಕೂಡ ಕಂಪ್ಯೂಟರ್ ಕಲಿಯಬೇಕು ಎನ್ನುವ ನಿಟ್ಟಿನಲ್ಲಿ ಶಾಲೆಗೆ ಈ ಕೊಡುಗೆಯನ್ನು ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಂಪ್ಯೂಟರ್ ಕೊಡುಗೆಯನ್ನು ನೀಡಲು ಸಹಕರಿಸಿದ ಆನಂದ್ ಫೆರ್ನಾಂಡೀಸ್, ಜೀವನ್ ಡಿಸೋಜಾ ಹಾಗೂ ಜೋಯ್ಸ್ ಟೆಲ್ಲಿಸ್ ಅವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ವೀಣಾ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಇಜಿಡಿಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಶೈಲೇಶ್ ರೈ, ಮಾಜಿ ಗ್ರಾಮ ಪಂಚಾಯತಿ ಸದಸ್ಯೆ ಜೋಯ್ಸ್ ಟೆಲ್ಲಿಸ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಾಲಚಂದ್ರ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಮುಖ್ಯ ಶಿಕ್ಷಕ ಕರುಣಾಕರ್ ನಾಯ್ಕ್ ಸ್ವಾಗತಿಸಿ, ಶಿಕ್ಷಕ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.