ಮೂಡುಬಿದಿರೆ, ಡಿ 22( DaijiworldNews/AK):ಮೂಡುಬಿದಿರೆ ಹಾಗೂ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಡಯಾಲಿಸಿಸ್ ಯಂತ್ರಗಳು ಹಾಗೂ ಟೆಕ್ನಿಷಿಯನ್ಸ್ಗಳನ್ನು ಮುಂದಿನ ತಿಂಗಳೊಳಗೆ ಒದಗಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದ ಅವರು, ಮುಂದಿನ ತಿಂಗಳಿನಿಂದ ತಾಲೂಕುವಾರು ಜನಸ್ಪಂದನ ಸಭೆ ನಡೆಸಿ ಸ್ಥಳೀಯವಾದ ಸಣ್ಣಪುಟ್ಟ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಜನಸಾಮಾನ್ಯರು ಸಲ್ಲಿಸುವ ಅರ್ಜಿಗಳು ಕಾಲಮಿತಿಯೊಳಗೆ ಇತ್ಯರ್ಥಗೊಳ್ಳಲು ಇದು ಸಹಕಾರಿಯಾಗಲಿದೆ ಎಂದ ಅವರು ಜನರಿಗೆ ನೇರ ತಲುಪುವ ಸರ್ಕಾರದ ನಾಲ್ಕು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದು ಯುವನಿಧಿಯನ್ನು ಮುಂದಿನ ತಿಂಗಳಿನಿಂದ ಜಾರಿಗೊಳಿಸಲಾಗುವುದು ಎಂದರು.
ಶಾಸಕ ಉಮನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.ಪೇಟೆಯ ಹೃದಯಭಾಗದಲ್ಲಿ ಪುರಸಭೆ ಮಾರುಕಟ್ಟೆಯ ಕಾಮಗಾರಿ ಕಾನೂನು ತೊಡಗಿಕಿಂದಾಗಿ ಅರ್ಧದಲ್ಲೇ ನಿಂತಿದೆ. ಇದರಿಂದ ವ್ಯಾಪಾರಿಗಳಿಗೆ ಮಾತ್ರವಲ್ಲ ಜನರಿಗೂ ತೊಂದರೆಯಾಗುತ್ತಿದೆ ಎಂದು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸಚಿವರ ಗಮನಕ್ಕೆ ತಂದರು.
ಈ ಕುರಿತು ಪರಿಶೀಲಿಸಿ, ಮಾರುಕಟ್ಟೆ ನಿರ್ಮಾಣಕ್ಕೆ ಪೂರಕವಾದ ಪ್ರಯತ್ನಗಳನ್ನು ಮಾಡುವಂತೆ ಸಚಿವರು ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಸಹಾಯಕ ಆಯುಕ್ತ ಹರ್ಷವರ್ಧನ್, ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಉಪಸ್ಥಿತರಿದ್ದರು. ಉಪತಹಸೀಲ್ದಾರ್ ರಾಮ ಕೆ. ಫಲಾನುಭವಿಗಳ ವಿವರ ನೀಡಿದರು. ಒಟ್ಟು 109 ಮಂದಿಗೆ ಪಿಂಚಣಿ, 94ಸಿ, 94ಸಿಸಿಯಡಿ ಆದೇಶ ಪತ್ರ ವಿತರಿಸಲಾಯಿತು.