ಉಡುಪಿ, ಡಿ 22 (DaijiworldNews/MS): ನೇಜಾರಿನಲ್ಲಿ ನವೆಂಬರ್ 12 ರಂದು ನಡೆದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗಲೆ ಸಲ್ಲಿಸಿರುವ ಜಾಮೀನು ಅರ್ಜಿಗೆ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿಯವರು ಉಡುಪಿಯ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಗುರುವಾರ ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ.
ಆರೋಪಿ ಪರ ವಕೀಲ ಕೆ.ಎಸ್.ಎನ್.ರಾಜೇಶ್ ಅವರು ವಾದ ಮಂಡಿಸಲು ಅವಕಾಶ ಕೋರಿದರು. ಆ ಹಿನ್ನೆಲೆಯಲ್ಲಿ ನ್ಯಾಯಾಧೀಶ ದಿನೇಶ್ ಹೆಗ್ಡೆ ಅವರು ಡಿ. 29ಕ್ಕೆ ವಾದ ಮಂಡಿಸಲು ದಿನಾಂಕ ನಿಗದಿಪಡಿಸಿದರು. ಇದೇ ದಿನ ಸರಕಾರಿ ಅಭಿಯೋಜಕರು ಪ್ರತಿವಾದ ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 12 ರಂದು ಸಂತೆಕಟ್ಟೆ ನೇಜಾರು ಸಮೀಪದ ತೃಪ್ತಿ ನಗರದಲ್ಲಿ ತಾಯಿ ಹಾಗೂ ಮೂವರು ಮಕ್ಕಳನ್ನು ಬರ್ಬರವಾಗಿ ಇರಿದು ಕೊಲೆ ಮಾಡಲಾಗಿತ್ತು. ಹಸೀನಾ (46), ಅಫ್ನಾನ್ (23), ಅಯ್ನಾಝ್ (21) ಮತ್ತು ಆಸಿಂ (12) ಎಂಬುವರನ್ನು ಕೊಲೆ ಮಾಡಿ, ಹಂತಕ ಪ್ರವೀಣ್ ಚೌಗಲೆ ಎಸ್ಕೇಪ್ ಆಗಿದ್ದ. ಈತನನ್ನು ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿ ಬಂಧಿಸಲಾಗಿತ್ತು.