ಉಳ್ಳಾಲ, ಡಿ 21 (DaijiworlsNews/AA): ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ ರೂಪಾಂತರಿ ಜೆಎನ್ 1 ಪ್ರಕರಣಗಳಿಂದಾಗಿ ರಾಜ್ಯದ ಗಡಿಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅದರಂತೆ ಗಡಿಭಾಗವಾದ ತಲಪಾಡಿಯಲ್ಲಿ ಆರೋಗ್ಯ ಇಲಾಖೆ ಮತ್ತು ತಲಪಾಡಿ ಗ್ರಾ.ಪಂ. ನಿಂದ ಜಾಗೃತಿ ಕಾರ್ಯಕ್ರಮ ಇಂದು ಪ್ರಾರಂಭವಾಗಿದೆ.
ಕೋಟೆಕಾರು ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ, ಸಮುದಾಯ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಗಡಿಯಲ್ಲಿ ಬ್ಯಾನರ್ ಹಾಕಿ ಜಾಗೃತಿ ಮೂಡಿಸುತ್ತಿದ್ದಾರೆ. ಜೊತೆಗೆ ಕೇರಳದಿಂದ ಬರುವ ಪ್ರಯಾಣಿಕರಿಗೆ ಮಾಹಿತಿ ಒದಗಿಸುತ್ತಿದ್ದಾರೆ.
ಇನ್ನು ಹಿರಿಯರು, ಗರ್ಭಿಣಿಯರು, ಆರೋಗ್ಯ ಸಮಸ್ಯೆ ಇರುವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಹಾಗೆ ಶೀತ ಕಫ ಸೇರಿದಂತೆ ಆರೋಗ್ಯ ಸಮಸ್ಯೆ ಇರುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು. ಗಡಿ ಪ್ರದೇಶದಿಂದ ಆಗಮಿಸುವ ಕೇರಳ ಪ್ರಯಾಣಿಕರು ಗುಂಪು ಸೇರದೆ ಅಂತಕ ಕಾಯ್ದುಕೊಳ್ಳಬೇಕು ಎಂದು ತಲಪಾಡಿ ಗ್ರಾ.ಪಂ. ಸಿಬ್ಬಂದಿಗಳು ಗಡಿಭಾಗದಲ್ಲಿ ಧ್ವನಿವರ್ಧಕವನ್ನು ಬಳಸಿಕೊಂಡು ಜಾಗೃತಿ ಮೂಡಿಸುತ್ತಿದ್ದಾರೆ.
ಆರೋಗ್ಯ ಇಲಾಖೆಯ ನಿರ್ದೇಶನದಂತೆ ಗಡಿ ಭಾಗದಲ್ಲಿ ಜಾಗೃತಿ ಕಾರ್ಯ ನಡೆಸುತ್ತಿದ್ದೇವೆ. ಕೇರಳದಿಂದ ಆಗಮಿಸುವ ಪ್ರಯಾಣಿಕರಿಗೆ ಸೂಚನೆಗಳನ್ನು ನೀಡಲಾಗುತ್ತಿದೆ ಎಂದು ಕೋಟೆಕಾರು ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ಗೋಪಿ ಪ್ರಕಾಶ್ ಅವರು ಹೇಳಿದ್ದಾರೆ.