ಉಡುಪಿ, ಡಿ 21 (DaijiworlsNews/AA): "ಆಧಾರ್ ಲಿಂಕ್ ಮಾಡಿಸಿ, ಇ-ಕೆವೈಸಿ ಮಾಡದೇ ಇದ್ದರೆ ಸಬ್ಸಿಡಿ ಬರುವುದಿಲ್ಲ, ಗೃಹ ಬಳಕೆಯ ಸಂಪರ್ಕ ವಾಣಿಜ್ಯ ಬಳಕೆಯ ಗ್ಯಾಸ್ ಸಂಪರ್ಕವಾಗಿ ಬದಲಾಗಲಿದೆ, ಗ್ಯಾಸ್ ಸಂಪರ್ಕ ರದ್ದಾಗಲಿದೆ ಎಂಬ ಇತ್ಯಾದಿ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಗೃಹಬಳಕೆಯ ಗ್ಯಾಸ್ ಸಂಪರ್ಕ ಪಡೆದವರು ಇ-ಕೆವೈಸಿ ಮಾಡಿಸಿಕೊಳ್ಳಲು ಜನರು ಗ್ಯಾಸ್ ಏಜೆನ್ಸಿಗಳ ಕಚೇರಿಗಳನ್ನು ಮುತ್ತಿಗೆ ಹಾಕಿರುವ ದೃಶ್ಯ ಕರಾವಳಿಯ ಜಿಲ್ಲೆಯಲ್ಲಿ ಕಂಡುಬರುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶಗಳ ಹಿನ್ನೆಲೆ ಜನರು ಗೊಂದಲಕ್ಕೀಡಾಗಿದ್ದು, ಕಳೆದೊಂದು ವಾರದಿಂದ ಗ್ಯಾಸ್ ಏಜೆನ್ಸಿಗಳ ಕಚೇರಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲೆಯ ಪ್ರಮುಖ ಗ್ಯಾಸ್ ಏಜೆಂಟ್ ಒಬ್ಬರು, ಗ್ರಾಹರೆಲ್ಲರಿಗೂ ಇ-ಕೆವೈಸಿ ಮಾಡಲು ಸೂಚನೆ ಬಂದಿರುವುದರಿಂದ ಎಲ್ಲಾ ಗ್ಯಾಸ್ ಏಜೆನ್ಸಿಗಳಲ್ಲಿ ಗ್ರಾಹಕರ ಬೆರಳಚ್ಚು ಪಡೆದು ಆಧಾರ್ ಲಿಂಕ್ ಹಾಗೂ ಇ-ಕೆವೈಸಿ ಮಾಡಿಸಲಾಗುತ್ತಿದೆ. ಆದರೆ ಮತ್ತೆ ಸಬ್ಸಿಡಿ ಸಿಗಲಿದೆ, ಡಿ. 31ರೊಳಗೆ ಈ ಪ್ರಕ್ರಿಯೆ ಮುಗಿಸಬೇಕು ಎಂಬ ವಿಷಯಗಳಿಗೂ ಇ-ಕೆವೈಸಿಗೂ ಯಾವ ಸಂಬಂಧವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಗ್ಯಾಸ್ ಏಜೆನ್ಸಿಗಳಿಗೆ ಬರುತ್ತಿರುವುದರಿಂದ ಅವರನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ ಎಂದರು.
"ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಸಂದೇಶವೊಂದು ವೈರಲ್ ಆಗುತ್ತಿರುವ ಬಗ್ಗೆ ಮಾಹಿತಿ ಬಂದಿವೆ.ಆಧಾರ್ ದೃಢೀಕರಣವು ಉಜ್ವಲ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಮಾತ್ರ ಕಡ್ಡಾಯವಾಗಿದೆ. ಉಳಿದ ಬಳಕೆದಾರರಿಗೆ ಗ್ಯಾಸ್ ಸಬ್ಸಿಡಿಯ ಬಗ್ಗೆ ಪ್ರಸ್ತುತ ಯಾವುದೇ ಘೋಷಣೆ ಆಗಿರುವುದಿಲ್ಲ. ಗ್ಯಾಸ್ ಬಳಕೆದಾರರು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು ದಕ್ಷಿಣ ಕನ್ನಡ ಆಹಾರ ಇಲಾಖೆಯ ಉಪನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ".
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶದಲ್ಲಿ ಗ್ಯಾಸ್ ಸಂಪರ್ಕ ಇರುವವರು ಡಿ. 31ರೊಳಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಗ್ಯಾಸ್ ಏಜೆನ್ಸಿ ನೀಡಿರುವ ಪುಸ್ತಕ ಅಥವಾ ಕಾರ್ಡ್ ಜೊತೆಗೆ ಏಜೆನ್ಸಿ ಕಚೇರಿಗೆ ಭೇಟಿ ನೀಡಿ, ಕೆವೈಸಿ ಮಾಡಿಸಬೇಕು. ಕೆವೈಸಿ ಮಾಡಿಸಿದರೆ ಜ. 1ರಿಂದ ಸಬ್ಸಿಡಿ ಬರುತ್ತದೆ. ಪ್ರಸ್ತುತ ಸಿಲಿಂಡರ್ ಗೆ 903 ರೂ. ಇದ್ದು, ಸಬ್ಸಿಡಿಯ ಬಳಿಕ 500 ರೂ.ಗಳಿಗೆ ಸಿಲಿಂಡರ್ ಸಿಗುತ್ತದೆ. ಕೆವೈಸಿ ಮಾಡದಿದ್ದರೆ ಸಬ್ಸಿಡಿ ರಹಿತವಾಗಿ ಗ್ಯಾಸ್ ಸಂಪರ್ಕವು ಕಮರ್ಶಿಯಲ್ ಆಗಿ ಮಾರ್ಪಡುತ್ತದೆ. ಆಗ ಸಿಲಿಂಡರ್ ಗೆ 1,400 ರೂ. ಹಣ ನೀಡಬೇಕಾಗುತ್ತದೆ ಎಂದು ಸಂದೇಶ ವೈರಲ್ ಆಗುತ್ತಿದೆ.