ಸುಳ್ಯ, ಡಿ 20 (DaijiworldNews/AK): ತಾಲೂಕಿನ ಮಂಡೆಕೋಲು, ಮುರೂರು, ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ಕಾಡಾನೆ ದಾಳಿ ನಡೆಸಿ, ಕೃಷಿ ವಸ್ತುಗಳನ್ನು ಹಾನಿ ಉಂಟು ಮಾಡಿರುವ ಘಟನೆ ನಡೆದಿದೆ.
ಕಾಡಾನೆಗಳ ಪೈಕಿ ಒಂಟಿ ಸಲಗವೊಂದು ಗುಂಪಿನಿಂದ ಬೇರ್ಪಟ್ಟು, ಕನಕಮಜಲು ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಕಳೆದ ಮೂರು ದಿನಗಳಿಂದ ಗ್ರಾಮದ ಕೃಷಿಕರ ತೋಟಕ್ಕೆ ನಿರಂತರವಾಗಿ ದಾಳಿ ಮಾಡಿ, ಕೃಷಿ ಹಾನಿಗೊಳಿಸುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಮಾಹಿತಿ ಪ್ರಕಾರ ಒಟ್ಟು ಹತ್ತು ಆನೆಗಳಿದ್ದು, ಕಳೆದ ಕೆಲವು ದಿನಗಳಿಂದ ಮುರೂರು, ಪಂಜಿಕಲ್ಲು ಪರಿಸರದಲ್ಲಿದ್ದು,ಕಾಡಾನೆ ಗುಂಪಿನಿಂದ ಬೇರ್ಪಟ್ಟಿರುವ ಒಂಟಿ ಸಲಗವೊಂದು ಕಳೆದ ಮೂರು ದಿನಗಳಿಂದ ಕನಕಮಜಲು ಗ್ರಾಮದ ಕುದ್ಮುಳಿ, ಕಾಪಿಲ, ಮುಗೇರು ಪರಿಸರದಲ್ಲಿ ನಿರಂತರವಾಗಿ ರಾತ್ರಿಯ ವೇಳೆ ಕೃಷಿಕರ ತೋಟಕ್ಕೆ ದಾಳಿ ನಡೆಸುತ್ತಿದ್ದು, ಈ ಭಾಗದ ಕೃಷಿಕರ ನಿದ್ದೆಗೆಡಿಸಿದೆ ಎನ್ನಲಾಗಿದೆ. ಅರಣ್ಯ ಇಲಾಖೆ ಈ ಕಡೆ ಗಮನ ಹರಿಸಿ ನ್ಯಾಯ ಒದಗಿಸುವಂತೆ ಸ್ಥಳೀಯರು ವಿನಂತಿಸಿದ್ದಾರೆ.