ಉಡುಪಿ, ಏ 19(Daijiworld News/MSP): ಕೆಲಸಕ್ಕಾಗಿ ಕಾಯುತ್ತಿದ್ದ ವಲಸೆ ಕಾರ್ಮಿಕರ ಮೇಲೆ ನೋಟಿನ ಮಳೆ ಬಿದ್ದರೆ ಹೇಗಾಗಿರಬೇಡ? ಇದು ಕಲ್ಪನೆಯಲ್ಲ ಈ ನೈಜ ಘಟನೆ ನಡೆದದ್ದು ಉಡುಪಿಯ ನರ್ಮ್ ಬಸ್ ನಿಲ್ದಾಣ ಬಳಿ.
ಏ.19ರ ಶುಕ್ರವಾರ, ಬೆಳಗ್ಗೆ ಸುಮಾರು 10.20 ರ ವೇಳೆಗೆ ಉಡುಪಿಯ ನರ್ಮ್ ಬಸ್ ನಿಲ್ದಾಣದ ಬಳಿ ವಲಸೆ ಕಾರ್ಮಿಕರು ಕೆಲಸಕ್ಕಾಗಿ ಕಾಯುತ್ತಾ ನಿಂತಿದ್ದಾಗ ಚಲಿಸುವ ಕಾರಿನಿಂದ ನೋಟಿನ ಮಳೆ ಸುರಿದಿದೆ. ತಕ್ಷಣ ಕಾರ್ಮಿಕರು, ತಾಮುಂದು ನಾಮುಂದು ಎಂದು ಬಿದ್ದ ಗರಿ ಗರಿ ನೋಟುಗಳನ್ನು ಹೆಕ್ಕಿ ಎಲ್ಲರೂ ಅವಸರವಾಗಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಕಾರಿನಲ್ಲಿ ಬಂದ ಅಪರಿಚಿತ ಬೇಕೆಂದೆ 50 ಮತ್ತು 100 ರೂ. ಮುಖ ಬೆಲೆಯ ಸಾವಿರಾರು ರೂಪಾಯಿಗಳನ್ನು ಎಸೆದಿದ್ದು ನೋಟು ಹೆಕ್ಕುವ ಭರದಲ್ಲಿ ಯಾರು ಹೆಚ್ಚಾಗಿ ಕಾರಿನ ಬಗ್ಗೆ ಗಮನಹರಿಸಿಲ್ಲ. ಕಾರು ಮಣಿಪಾಲ ಕಡೆಯಿಂದ ಮಲ್ಪೆ ಕಡೆಗೆ ಹಾದುಹೋಗಿದೆ ಎಂದು ತಿಳಿದು ಬಂದಿದೆ.
ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಪರಿಶೀಲನೆಯಲ್ಲಿ ತೊಡಗಿದ್ದಾರೆ.