ಬಂಟ್ವಾಳ, ಏ 19 (Daijiworld News/MSP): ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 122 ಹಾಗೂ ಮತಗಟ್ಟೆ ಸಂಖ್ಯೆ 123ರಲ್ಲಿ ನಕಲಿ ಮತದಾನ ಮಾಡಲು ಬಂದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ಅನ್ವರ್ (30) ಹಾಗೂ ಮೊಹಮ್ಮದ್ ಶಫಿಕ್ (19) ಎಂದು ಗುರುತಿಸಲಾಗಿದೆ. ಮತಗಟ್ಟೆ ಸಂಖ್ಯೆ 122 ಮತಗಟ್ಟೆ ಅಧಿಕಾರಿ ರವೀಂದ್ರ ರೈ ಅವರು ಬಂಟ್ವಾಳ ನಗರ ಠಾಣೆಯಲ್ಲಿ ನೀಡಿದ ದೂರಿನಂತೆ ಆರೋಪಿ ಶಾಫೀಕ್ ನನ್ನು ಬಂಧಿಸಲಾಗಿದೆ.
"ಮೊಹಮ್ಮದ್ ಶಫಿಕ್ ಬೂತ್ ಗೆ ಮತ ಚಲಾಯಿಸಲು ಬಂದಾಗ ಆತನನ್ನು ನೋಡಿದ ಮತದಾರ ಏಜೆಂಟ್ ಇಮ್ರಾನ್ ಎಂಬವರು, ಮತದಾರ ನೈಜನಾಮ ಮೊಹಮ್ಮದ್ ಶಫಿಕ್ ಎಂದಾಗಿದ್ದು ಈತನಿಗೆ ಈ ಮತಗಟ್ಟೆಯಲ್ಲಿ ಓಟಿಲ್ಲ ಎಂಬುದಾಗಿ ತಿಳಿಸಿದ್ದು, ತಕ್ಷಣ ಮತದಾನ ಮಾಡಲು ಬಂದ ವ್ಯಕ್ತಿಯ ಮತದಾನ ಗುರುತಿನ ಚೀಟಿಯನ್ನು ಪರೀಕ್ಷಿಸಿದಾಗ ಅದರಲ್ಲಿ ಆಸಿಫ್ ಆಲಿ ತಂದೆ ಹಂಝ ಎಂಬುದಾಗಿ ಉಲ್ಲೇಖವಾಗಿರುತ್ತದೆ.ಆದರೆ ಈತನನ್ನು ವಿಚಾರಿಸಿದಾಗ ಪರ್ಲಿಯಾದ ನಿವಾಸಿ ಶಾಹುಲ್ ಹಮೀದ್ ಪುತ್ರ ಮೊಹಮ್ಮದ್ ಶಫೀಕ್ ಎಂದು ತಿಳಿದು ಬಂದಿದ್ದು ಉದ್ದೇಶ ಫೂರ್ವಕವಾಗಿ ಮತದಾನ ಮಾಡಲು ಮತದಾನ ಕೇಂದ್ರದ ಒಳಗೆ ಬಂದಿದ್ದು, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾನೆ " ಎಂದು ಮತಗಟ್ಟೆ ಅಧಿಕಾರಿ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.
ಮತಗಟ್ಟೆ ಸಂಖ್ಯೆ 122 ಪ್ರಕರಣದಲ್ಲಿ, ಮತಗಟ್ಟೆಗೆ ನಿಯೋಜಿಸಿದ ಭದ್ರತಾ ಸಿಬ್ಬಂದಿ ಸೌಮ್ಯ ಎಂಬವರು ಬಂಟ್ವಾಳ ನಗರ ಠಾಣೆಯಲ್ಲಿ ಮತಗಟ್ಟೆ ಅಧಿಕಾರಿ ಅಶೋಕ್ ರೈ ಅವರ ವಿರುದ್ದ ಕರ್ತವ್ಯ ಲೋಪದ ಬಗ್ಗೆ ಹಾಗೂ ನಕಲಿ ಮತದಾರ ಅನ್ವರ್ ಎಂಬವರ ವಿರುದ್ದ ದೂರು ನೀಡಿದ್ದಾರೆ.
ಮತಗಟ್ಟೆಯಲ್ಲಿದ್ದ ಏಜೆಂಟ್ ದೂರಿನಂತೆ ಮತಗಟ್ಟೆ ಅಧಿಕಾರಿ ಅಶೋಕ್ ರೈ ಎಂಬವರು ವ್ಯಕ್ತಿಯೊಬ್ಬ ಎರಡನೇ ಸಲ ಮತದಾನ ಮಾಡಲು ಬಂದಿರುತ್ತಾನೆ ಎಂದು ದೂರುದಾರ ಭದ್ರತಾ ಸಿಬ್ಬಂದಿಯ ಗಮನಕ್ಕೆ ತಂದಾಗ, ಆತನನ್ನು ವಿಚಾರಿಸಿದಾಗ ಬಾವು ಬ್ಯಾರಿಯ ಪುತ್ರ ಅನ್ವರ್ ಎಂದು ತಿಳಿಸಿದ್ದು, ತನ್ನ ಹೆಸರು ಮತದಾರರ ಪಟ್ಟಿಯಲ್ಲಿ ಎರಡು ಸಲ ಬಂದಿರೋ ಕಾರಣ ಮೊದಲ ಬಾರಿ ಮತಚಲಾಯಿಸಿದ ಬೆರಳಿನ ಶಾಹಿ ಅಳಿಸಿ ಮತ್ತೊಮ್ಮೆ ಉದ್ದೇಶ ಫೂರ್ವಕವಾಗಿ ಮತದಾನ ಮಾಡಲು ಮತದಾನ ಕೇಂದ್ರದ ಒಳಗೆ ಬಂದಿದ್ದು, ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿರುತ್ತಾನೆ. ಮಾತ್ರವಲ್ಲ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಡಿ ಮಸ್ಟರಿಂಗ್ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಮತಗಟ್ಟೆಯ ಅಧಿಕಾರಿಯವರ ಬಳಿ ದೂರು ನೀಡಲು ತಿಳಿಸಿದಾಗ, ದೂರು ನೀಡದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.