ಮಂಗಳೂರು, ಡಿ 17 (DaijiworldNews/AA): ರಸ್ತೆಯಲ್ಲಿ ಸಿಕ್ಕಿದ ಮೊಬೈಲ್ ಅನ್ನು ಬಳಸಿದ ವ್ಯಕ್ತಿಯೋರ್ವ ಮೊಬೈಲ್ ವಾರಸುದಾರರ ಫೋನ್ ಪೇ ಮೂಲಕ ಹಣವನ್ನು ವರ್ಗಾಯಿಸಿ ವಂಚಿಸಿರುವ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರು ಈ ಕುರಿತು ನೀಡಿರುವ ದೂರಿನಲ್ಲಿ ಡಿ.3ರಂದು ಅಡ್ಯಾರ್ ಕಣ್ಣೂರಿಗೆ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ತನ್ನ ಎರಡು ಮೊಬೈಲ್ ಹ್ಯಾಂಡ್ಸೆಟ್ಗಳನ್ನು ಕಳೆದು ಕೊಂಡಿದ್ದು, ಈ ಬಗ್ಗೆ ಕಂಕನಾಡಿ ಠಾಣೆಗೆ ದೂರು ನೀಡಿದ್ದೆ. ಎರಡು ದಿನದ ಬಳಿಕ ಒಂದು ಮೊಬೈಲ್ ನ ಸಿಮ್ ಆನ್ ಆಗಿತ್ತು. ಬಳಿಕ ಸಂಬಂಧಿಕರ ಫೋನ್ ಮೂಲಕ ಸಂಪರ್ಕಿಸಿದ್ದು, ಕರೆ ಸ್ವೀಕರಿಸಿದ ವ್ಯಕ್ತಿ ಹಿಂದಿ ಭಾಷೆಯಲ್ಲಿ ಮಾತನಾಡಿ ಮಂಗಳೂರಿನ ಪಡೀಲ್ ನಲ್ಲಿ ಮೊಬೈಲ್ ದೊರಕಿದೆ. ನಾನೀಗ ಕಡಬದಲ್ಲಿ ಇದ್ದೇನೆ. ನಾಲ್ಕು ದಿನಗಳ ಬಳಿಕ ಮಂಗಳೂರಿಗೆ ಬಂದು ಮೊಬೈಲ್ ಹಿಂತಿರುಗಿಸುವುದಾಗಿ ತಿಳಿಸಿದ್ದ.
ಇನ್ನು ಆತ ನಾಲ್ಕು ದಿನ ಕಳೆದರು ಮೊಬೈಲ್ ತಂದುಕೊಡಲಿಲ್ಲ. ಬಳಿಕ ನಾನು ಡಿ. 12 ರಂದು ಹಳೆಯ ನಂಬರ್ ನ ಮೊಬೈಲ್ ಸಿಮ್ ಅನ್ನು ಬ್ಲಾಕ್ ಮಾಡಿಸಿ ಹೊಸ ಸಿಮ್ ಖರೀದಿ ಮಾಡಿದ್ದೆ. ಅದೇ ದಿನ ತನ್ನ ಮೊಬೈಲ್ ನ ಫೋನ್ ಪೇ ಮೂಲಕ 1.82 ಲಕ್ಷ ರೂ. ಗಳನ್ನು ಆತ ಬೇರೆ ಬೇರೆ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾನೆ ಎಂದು ದೂರು ದಾಖಲಾಗಿದೆ.