ಮಂಗಳೂರು, ಎ19(Daijiworld News/SS): ಮುಂದಿನ ಸರಕಾರವನ್ನು ನಿರ್ಧರಿಸಲಿರುವ ಬಹು ನಿರೀಕ್ಷಿತ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ರಾಜ್ಯದಲ್ಲಿ ಮುಕ್ತಾಯಗೊಂಡಿದೆ. ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಶೇ.77.25ರಷ್ಟು ಮತದಾನವಾಗಿದ್ದರೆ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.75.8ರಷ್ಟು ಮತದಾನವಾಗಿದೆ.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಶೇ.77ಕ್ಕಿಂತ ಅಧಿಕ ಮತದಾನವಾಗಿರುವುದು ವಿಶೇಷವಾಗಿದೆ. 2018ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.77.64ರಷ್ಟು ಮತದಾನವಾಗಿದ್ದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಶೇ.77.19ರಷ್ಟು ಮತದಾನವಾಗಿತ್ತು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 2014ರ ಲೋಕಸಭಾ ಚುನಾವಣೆಯಲ್ಲಿ ಶೇ.73.59ರಷ್ಟು ಮತದಾನವಾಗಿತ್ತು.
ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮತದಾರ ಪ್ರಭುಗಳು ಚುರುಕಿನಿಂದ, ಉತ್ಸಾಹದಿಂದ, ಶಾಂತಿಯುತವಾಗಿ ಮತದಾನ ಮಾಡಿದ್ದಾರೆ. 2014ರಲ್ಲಿ ಏಪ್ರಿಲ್ 17ರಂದು ನಡೆದಿದ್ದ ಚುನಾವಣೆ ಈ ಬಾರಿ ಏ.18ರಂದು ನಡೆದಿದ್ದು ಗಮನಾರ್ಹ. ಬಿಸಿಲಿನ ಝಳ, ಸೆಖೆಯ ವಾತಾವರಣಕ್ಕೂ ಬೆದರದೆ ಹೆಚ್ಚಿನವರೂ ಬೆಳಗ್ಗೆಯೇ ಸರತಿ ಸಾಲಲ್ಲಿ ನಿಂತು ಮತಹಾಕಿದ್ದಾರೆ.