ಮಂಗಳೂರು,ಡಿ16(DaijiworldNews/RA):ಕರಾವಳಿ ಕರ್ನಾಟಕದಲ್ಲಿ ರಾಣಿ ಅಬ್ಬಕ್ಕನ ಹೆಸರಿನಲ್ಲಿ ಸೈನಿಕ ಶಾಲೆ ತೆರೆಯುವ ಭರವಸೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ್ದಾರೆ.
ಅವರು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ರಾಣಿ ಅಬ್ಬಕ್ಕ ದೇವಿ ಅವರ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ನಂಬಿರುವುದರಿಂದ ಮಹಿಳಾ ಮಸೂದೆ ಸಾಕಾರಗೊಂಡಿದೆ ಎಂದರು.
ಪೋರ್ಚುಗೀಸರ ವಿರುದ್ಧ ಹೋರಾಡಿದ 16 ನೇ ಶತಮಾನದ ಉಳ್ಳಾಲದ ರಾಣಿ ಅಬ್ಬಕ್ಕ ಅವರ ಧೈರ್ಯ ಮತ್ತು ವೀರಾವೇಶವನ್ನು ನಿರ್ಮಲಾ ಸೀತಾರಾಮನ್ ಶ್ಲಾಘಿಸಿದರು.
ಇದೇ ವೇಳೆ ಅಬ್ಬಕ್ಕನ ಭಾವಚಿತ್ರ ಬಿಡಿಸಿದ ಕಲಾವಿದ ವಾಸುದೇವ್ ಕಾಮತ್ ಅವರನ್ನು ಅಭಿನಂದಿಸಿದರು.
ಸಾಮ್ರಾಜ್ಯಶಾಹಿ ಶಕ್ತಿಗಳ ವಿರುದ್ಧ ಹೋರಾಡಿದ ಅನೇಕ ಅಜ್ಞಾತ ಹೋರಾಟಗಾರರ ಕೊಡುಗೆಗಳನ್ನು ದಾಖಲಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದರು.