ಉಡುಪಿ, ಡಿ 16 (DaijiworldNews/MS): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಹೆಸರಿಡುವಂತೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಆಗ್ರಹಿಸಿದೆ.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಆಗ್ರಹಿಸಿದ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸಂಸ್ಥಾಪಕರಾದ ತೋನ್ಸೆ ಜಯಶ್ರೀಕೃಷ್ಣ ಶೆಟ್ಟಿ ಮಾತನಾಡಿ “ತುಳುನಾಡಿನ ಅಭಿವೃದ್ಧಿಯ ಹರಿಕಾರ,ಪ್ರಗತಿಯ ಹುರಿಕಾರ, ಸರ್ವಾಭಿವೃದ್ಧಿಯ ಗುರಿಕಾರ' ನಾಗಿ ತುಳು ಕನ್ನಡ ಕರಾವಳಿಯ, ಕರ್ನಾಟಕ ರಾಜ್ಯದ ಅಷ್ಟೇ ಏಕೆ ಸಮಗ್ರ ಭಾರತೀಯ ರಾಜಕಾರಣದ ಕಣ್ಮಣಿಯಾಗಿ ಶೋಭಿಸಿದ ಜಾರ್ಜ್ ಫರ್ನಾಂಡಿಸ್ ಅವರ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂಬ ನಮ್ಮ ಬಹುಕಾಲದ ಆಗ್ರಹದ. ಮಂಗಳೂರು ಮುಂಬಯಿ ನಡುವಣ ಸಂಚಾರಕ್ಕೆ ವರದಾನವಾಗಿ ದೊರೆತ ಕೊಂಕಣ ರೈಲ್ವೆ. ಮಂಗಳೂರು - ಬೆಂಗಳೂರು ನಡುವಣ ಬ್ರಾಡ್ ಗೇಜ್ ಪರಿವರ್ತನೆ,ಮಂಗಳೂರು ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆಯನ್ನು ಮಾಡುವ ಮೂಲಕ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಗೊಳಿಸಿದ ಯೋಜನೆಗಳಿರಬಹುದು, ಕಾರವಾರದ ಪ್ರತಿಷ್ಠಿತ ಸೀ ಬರ್ಡ್ ಯೋಜನ ಹೀಗೆ ಹತ್ತಾರು ಯೋಜನೆಗಳು ಶರವೇಗ ಪಡೆದು ಸಾಕಾರಗೊಳ್ಳುವಲ್ಲಿ ಅವರ ಬದ್ಧತೆ, ದೂರದೃಷ್ಟಿ ಮತ್ತು ಅವರ ಕಾರ್ಯಕ್ಷಮತೆಗೆ ಸಾಟಿಯ ಇರಲಿಲ್ಲ, ಇನ್ನಾವುದೇ ರಾಜಕಾರಣಿಗೆ ಸಾಧ್ಯವಾಗದ ರೀತಿಯಲ್ಲಿ ಅವರಿದನ್ನು ಸಾಧ್ಯವಾಗಿಸಿ ಕಾರ್ಯಗತಗೊಳಿಸಿದ್ದಾರೆ.
ಇತ್ತೀಚೆಗೆ ವಿಧಾನಸಭೆಯಲ್ಲಿ ಪ್ರತಿವಾದಿಸಲ್ಪಟ್ಟಿರುವ ಎರಡು ಹೆಸರುಗಳು ನಮ್ಮ ಸಾಂಸ್ಕೃತಿಕ ಚರಿತ್ರೆಯ, ನಾಡ ಇತಿಹಾಸದ ಭಾಗವಾಗಿರುವವುಗಳು, ರಾಷ್ಟ್ರ ಸ್ವಾತಂತ್ರ್ಯ ಹೋರಾಟದ ಭಾಗ ನೆಲದ ಕೆಚ್ಚಿನ ಪ್ರತೀಕ. ಆದರೆ ಜಾರ್ಜ್ ಫೆರ್ನಾಂಡಿಸ್ ಹೆಸರಿನಲ್ಲಿ ನಮ್ಮ ಊರಿನಲ್ಲಿ ಎಲ್ಲೂ ಸ್ಮಾರಕಗಳು, ಕೇಂದ್ರಗಳು ಇಲ್ಲ. . ನಾವು ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವ ಕಿಂಚಿತ್ ಪ್ರತಿ ಗೌರವವನ್ನಾದರೂ ನೀಡಿ ಋಣ ಭಾರವನ್ನು ತಗ್ಗಿಸಿಕೊಳ್ಳಬೇಕು. ಕುರಿತಾಗಿ ನಾನು ಈಗಾಗಲೇ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಸಿದ್ದರಾಮಮಯ್ಯ ನವರಿಗೆ ವೈಯುಕ್ತಿಕವಾಗಿ ಭೇಟಿ ಮಾಡಿ ಮನವರಿಕೆ ಮಾಡಿಸಿದ್ದೇನೆ ಅವರು ಕೂಡಾ ನಮ್ಮ ಮನವಿಗೆ ಸಕಾರಾತ್ನಕವಾಗಿ ಸ್ಪಂದಿಸಿದ್ದಾರೆ. ಆದರೆ ನಮ್ಮ ಎರಡೂ ಜಿಲ್ಲೆಯ ಶಾಸಕರು ಮತ್ತು ಸಂಸದರು ಕೂಡಾ ಇದರ ಕುರಿತು ಆಸಕ್ತಿ ವಹಿಸಿಬೇಕು” ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಪ್ರಕಾಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುರೇಂದ್ರ ಮೆಂಡನ್ ಉಪಸ್ಥಿತರಿದ್ದರು.